ಕನ್ನಡಪ್ರಭ ವಾರ್ತೆ ಶಿರಹಟ್ಟಿ
ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದ ಆವರಣದಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪರಿವರ್ತನೆ ಜಗದ ನಿಯಮ ಎಂಬಂತೆ ಶೋಷಿತ ವರ್ಗದಲ್ಲಿ ಜನಿಸಿ ಕಾಡಿನಲ್ಲಿ ನೆಲೆಸಿ ದರೋಡೆಯನ್ನು ತನ್ನ ಕಾಯಕ ಮಾಡಿಕೊಂಡಿದ್ದ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಬರೆಯುವ ಮಟ್ಟಿಗೆ ಬದಲಾದ.
ಹೀಗೆ ಬದಲಾವಣೆ ಮನುಷ್ಯನ ಸ್ಥಾನವನ್ನು ಎತ್ತರಕ್ಕೇರಿಸುತ್ತದೆ. ಅವರ ಅನುಯಾಯಿಗಳಾದ ನಾವುಗಳು ಅವರ ತತ್ವ, ಆದರ್ಶಗಳನ್ನು ಹಾಗೂ ಅವರ ವಿಚಾರಗಳನ್ನು ದಿನನಿತ್ಯದ ಜೀವದಲ್ಲಿ ಅಳವಡಿಸಿಕೊಳ್ಳಬೇಕು. ಮಹರ್ಷಿ ವಾಲ್ಮೀಕಿಯವರು ತಮ್ಮ ಜ್ಞಾನ, ತಪಸ್ಸು ಮತ್ತು ಸಾಹಿತ್ಯದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ, ತ್ಯಾಗ, ಕರ್ತವ್ಯನಿಷ್ಠೆ ಹಾಗೂ ಆದರ್ಶ ಜೀವನದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.ಮಹರ್ಷಿ ವಾಲ್ಮೀಕಿ ಜೀವನವು ಬದಲಾವಣೆ, ಆತ್ಮಪರಿಶೀಲನೆ ಮತ್ತು ಸಾಧನೆಗೆ ಪ್ರೇರಣೆಯಾಗಿದೆ. ಮನುಷ್ಯನು ತನ್ನಲ್ಲಿರುವ ದುರ್ಗುಣಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಾಧ್ಯ. ಅವರ ತತ್ವಾದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿದ್ದು, ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಮಾನವೀಯತೆಯನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಮಾನವ ಕುಲದಲ್ಲಿ ನೈತಿಕತೆಯ ಜಾಗೃತಿ ಮೂಡಿಸುವ ಜತೆಗೆ ಮನುಷ್ಯ ಬದುಕಿನಲ್ಲಿ ಶ್ರಮಿಸಿದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಆದಿ ಕವಿ ಮಹರ್ಷಿ ವಾಲ್ಮೀಕಿಯವರು. ಕೆಳವರ್ಗದಲ್ಲಿ ಜನಿಸಿದ್ದರು ಸಹ ತಮ್ಮ ಸಾಧನೆಯಿಂದ ಉತ್ತುಂಗಕ್ಕೇರುವ ಮುಖಾಂತರ ಇತಿಹಾಸದ ಪುಟಗಳಲ್ಲಿ ವಿರಾಜಮಾನರಾಗಿದ್ದಾರೆ. ಈ ಜಗತ್ತಿಗೆ ಅಹಿಂಸೆಯ ಸಂದೇಶ ನೀಡುವ ಮುಖಾಂತರ ಹಾಗೂ ಆದರ್ಶ ಜೀವನದ ರಾಮಾಯಣವನ್ನು ಪರಿಚಯಿಸಿರುವ ಇವರು ಸರ್ವಜನಾಂಗದ ಗುರುವಾಗಿದ್ದಾರೆ ಎಂದರು.