ಚನ್ನಪಟ್ಟಣ: ಸ್ವಾಮಿ ವಿವೇಕಾನಂದರು ಭಾರತೀಯರ ಬಗ್ಗೆ ವಿದೇಶಿಗರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿದ ಮಹಾಪುರುಷರು ಎಂದು ಮುಖ್ಯಶಿಕ್ಷಕ ಯೋಗೇಶ್ ಚಕ್ಕೆರೆ ಹೇಳಿದರು.
ಭಾರತ ವಿಕಾಸ ಪರಿಷತ್ತಿನ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್) ಮಾತನಾಡಿ, ಸ್ವಾಮಿ ವಿವೇಕಾನಂದರು ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದ ಮಹಾನ್ ದಾರ್ಶನಿಕರು ಎಂದು ಹೇಳಿದರು. ಅವರ ಆದರ್ಶಗಳು ಇಂದಿನ ವಿದ್ಯಾರ್ಥಿ ಮತ್ತು ಯುವಜನತೆಗೆ ಅತ್ಯಂತ ಅಗತ್ಯವಿವೆ. ಜೀವನದಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ದೇಶಭಕ್ತಿ ಬೆಳೆಸಿಕೊಳ್ಳಲು ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ. ಯುವಜನರು ಅವರ ವಿಚಾರಗಳನ್ನು ಅರಿತು ಅನುಸರಿಸಬೇಕು ಎಂದು ಹೇಳಿದರು.
ಭಾ.ವಿ.ಪ ಪ್ರಾಂತ್ಯ ಉಪಾಧ್ಯಕ್ಷ ಗುರುಮಾದಯ್ಯ ಮಾತನಾಡಿ, ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವ ಮತ್ತು ಪ್ರಭಾವಪೂರ್ಣ ಮಾತುಗಳಿಂದ ರಾಷ್ಟ್ರಚೇತನವನ್ನು ಜಾಗೃತಗೊಳಿಸಿದರು. ಯುವಜನರಲ್ಲಿ ನವೋತ್ಸಾಹ ಮೂಡಿಸಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಬೆಳೆಸಿದರು. ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು. ಅವರ ತತ್ವಾದರ್ಶಗಳು ಯುವಜನತೆಗೆ ಜೀವನ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಬಿ.ಕೆ. ಲತಾ ಮಾತನಾಡಿ, ವಿವೇಕಾನಂದರ ವ್ಯಕ್ತಿತ್ವ ವಿಶಾಲವಾಗಿದ್ದು, ಅವರ ಸಿದ್ಧಾಂತಗಳು ಸಹೋದರತೆ ಮತ್ತು ಸಮನ್ವಯತೆಯ ಬದುಕಿಗೆ ದಾರಿ ತೋರಿಸುತ್ತವೆ. ಅವರು ಯುವಜನತೆಗೆ ಪ್ರೇರಣೆಯ ಸಂಕೇತವಾಗಿದ್ದಾರೆ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ಗುಣಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾ.ವಿ.ಪ ಖಜಾಂಚಿ ವಿ.ಟಿ. ರಮೇಶ್, ಪ್ರಾಂತ್ಯ ಪದಾಧಿಕಾರಿ ಬೆಸ್ಕಾಂ ಶಿವಲಿಂಗಯ್ಯ, ಶಿಕ್ಷಕರಾದ ಮಧುಸೂದನ್, ವಸಂತರಾಜ್, ಪುಟ್ಟಮ್ಮ, ವಿಶ್ವನಾಥ ಸಿಂಗ್, ಪ್ರಥಮ ದರ್ಜೆ ಸಹಾಯಕ ಶಶಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪೊಟೋ೧೨ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ವಿಕಾಸ ಪರಿಷತ್ತು ಕಣ್ವ ಶಾಖೆಯ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.