ಕನ್ನಡಪ್ರಭ ವಾರ್ತೆ ಬೆಂಗಳೂರು
ಸತ್ಯಶೋಧನಾ ಸಮಿತಿ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಸಮಿತಿ ಸದಸ್ಯರಾದ ಮಾಳವಿಕಾ ಅವಿನಾಶ್, ಶಾಸಕ ಮುನಿರಾಜು ಮೊದಲಾದವರು ರಾಜ್ಯಪಾಲರನ್ನು ಭೇಟಿಯಾಗಿ 107 ಪುಟಗಳ ವರದಿ ಸಲ್ಲಿಸಿದರು.
167 ಕುಟುಂಬ ಅಕ್ರಮ ವಾಸ:ಕೋಗಿಲು ಲೇಔಟ್‌ನ ಸರ್ವೆ ನಂಬರ್ 99ರ ಫಕೀರ್ ಕಾಲೋನಿ, ಫಕೀರ್ ಕಾಲೋನಿ ನ್ಯೂ ಮತ್ತು ವಾಸೀಂ ಲೇಔಟ್‌ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಜೂರಾದ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದು ಸತ್ಯಶೋಧನೆ ವೇಳೆ ಬೆಳಕಿಗೆ ಬಂದಿದೆ. ಒಟ್ಟು 167 ಕುಟುಂಬಗಳ ಪೈಕಿ 31 ಹಿಂದೂ, 135 ಮುಸ್ಲಿಂ ಹಾಗೂ ಒಂದು ಕ್ರೈಸ್ತ ಕುಟುಂಬ ಇಲ್ಲಿ ವಾಸವಿದ್ದವು. ಇವರು ಸಲ್ಲಿಸಿರುವ ದಾಖಲಾತಿಗಳಾದ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್‌ಗಳಲ್ಲಿನ ವಿಳಾಸ ಮತ್ತು ಇತರೆ ವಿವರಗಳಲ್ಲಿ ವ್ಯತ್ಯಾಸಗಳಿರುವುದು ಕಂಡು ಬಂದಿದೆ ಎಂದು ಸತ್ಯಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
ದಾಖಲೆಗಳಲ್ಲಿ ವ್ಯತ್ಯಾಸ:ಈ 135 ಕುಟುಂಬಗಳ ಪೈಕಿ ಭಾರತೀಯ ನಾಗರಿಕರಲ್ಲದ, ಬಾಂಗ್ಲಾ ಅಥವಾ ರೋಹಿಂಗ್ಯಾ ಅಕ್ರಮ ವಲಸಿಗರು ಯಾರೆಂದು ಪತ್ತೆ ಹಚ್ಚುವ ಹೊಣೆ ಜಿಲ್ಲಾಡಳಿತದ ಮೇಲಿದೆ. ಅಕ್ರಮ ವಲಸಿಗರು ಹೀಗೆ ಆಧಾರ್ ಕಾರ್ಡ್‌ಗಳನ್ನು ಮತ್ತು ರೇಷನ್ ಕಾರ್ಡ್‌ಗಳನ್ನು ಸುಲಭವಾಗಿ ಪಡೆದುಕೊಂಡು, ಭಾರತೀಯ ನಾಗರಿಕರಿಗೆ ಮೀಸಲಿರುವ ಸಾಂವಿಧಾನಿಕ ಹಕ್ಕುಗಳು ಮತ್ತು ಸಂಪನ್ಮೂಲಗಳ ಮೇಲಿನ ಅಧಿಕಾರವನ್ನು ಅನುಭವಿಸುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದಿಂದ ಓಲೈಕೆ ರಾಜಕಾರಣ:ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಸುಳ್ಳು ಜಾತಿ, ಆದಾಯ ಮತ್ತು ವಾಸ ಸ್ಥಳದ ದೃಢೀಕರಣ ಪತ್ರಗಳನ್ನು ಆಧಾರವಾಗಿಟ್ಟುಕೊಂಡು ಕೇವಲ ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅವರ ಮತಗಳಿಗಾಗಿ ಅವರನ್ನು ಓಲೈಸುವ ದೃಷ್ಟಿಯಿಂದ ರಾಜ್ಯದ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರ್ವಸತಿ ಘೋಷಿಸಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ವಂಚನೆ ಆಗಿರುತ್ತದೆ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಮುಖಂಡನ ಹೆಸರಿನಲ್ಲಿ ಬಡಾವಣೆ:ಈ ಅಕ್ರಮ ಬಡಾವಣೆಗೆ ವಾಸೀಂ ಎಂಬಾತ ತನ್ನ ಹೆಸರಿನಲ್ಲಿ ಬಡಾವಣೆ ನಿರ್ಮಿಸಿ ಮೋಸದಿಂದ ಕೋಗಿಲು ಲೇಔಟ್ ನಲ್ಲಿ ವಾಸವಾಗಿದ್ದ ಕುಟುಂಬಗಳಿಂದ ₹3 ಲಕ್ಷದಿಂದ ₹5 ಲಕ್ಷ ಪಡೆದು ಮನೆ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾನೆ. ಆತ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡರ ಆಪ್ತನಾಗಿದ್ದಾನೆ ಎಂಬುದು ವಿಶೇಷ. ಸ್ವತಃ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರು ಅಕ್ರಮ ವಲಸಿಗರಿಂದ ಕಬಳಿಕೆ ಆಗಿರುವ ಸರ್ಕಾರಿ ಜಾಗಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಉಲ್ಲೇಖನಾರ್ಹ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕಂದಾಯ ಸಚಿವರ ಮೌನ ಆಶ್ಚರ್ಯ:ತಮ್ಮ ಮೂಗಿನ ನೇರದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಬೆಳವಣಿಗೆಗಳ ಕುರಿತು ಕಂದಾಯ ಸಚಿವರು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಆಶ್ಚರ್ಯಕರ. 167 ಕುಟುಂಬಗಳು ಸೂರಿಲ್ಲದೆ ನಿರಾಶ್ರಿತರಾಗಿರುವುದಕ್ಕೆ ಮುಖ್ಯ ಕಾರಣಕರ್ತನಾದ ವಾಸೀಂ ಎಂಬಾತನ ಮೇಲೆ ಘಟನೆ ನಡೆದ 15 ದಿನಗಳಾದರೂ ಎಫ್‌ಐಆರ್ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿಲ್ಲ. ಸಾರ್ವಜನಿಕರ ಒತ್ತಾಯದ ಮೇರೆಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ನಮ್ಮ ಸತ್ಯ ಶೋಧನಾ ಸಮಿತಿ ತಂಡವು ಅನುಮಾನ ಪಟ್ಟಿರುವುದು ಸ್ಪಷ್ಟವಾಗಿ ದೃಢಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸತ್ಯ ಶೋಧನಾ ಸಮಿತಿಯ ಆಗ್ರಹ:1. ಕೋಗಿಲು ಲೇಔಟ್‌ನಲ್ಲಿ ನಡೆದ ತೆರವು ಕಾರ್ಯಾಚರಣೆಯಿಂದ 167 ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿಗಮದ ಅಡಿಯಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಯಾವುದೇ ರೀತಿಯ ಕಾನೂನು/ನಿಯಮಗಳ ಅಡಿಯಲ್ಲಿ ಅವಕಾಶ ಇರುವುದಿಲ್ಲ.
2. ಕಾನೂನು/ನಿಯಮಬಾಹಿರ ಪುನರ್ವಸತಿ ಕಲ್ಪಿಸಿದರೆ ಒತ್ತುವರಿದಾರರಿಗೆ ಭವಿಷ್ಯದಲ್ಲಿ ಇದೊಂದು ಪೂರ್ವ ನಿದರ್ಶನವಾಗಲಿದೆ. ಇದರಿಂದ ಒತ್ತುವರಿದಾರರು ಮನಸೋ ಇಚ್ಛೆ ಸರ್ಕಾರಿ ಜಾಗಗಳಲ್ಲಿ ಶೆಡ್‌ಗಳನ್ನು ನಿರ್ಮಿಸಿ, ಆ ಜಾಗಗಳು ತೆರವುಗೊಂಡಾಗ ಪಕ್ಕಾ ಮನೆಗಳನ್ನು ಸರ್ಕಾರದಿಂದ ಪಡೆಯುವ ಹಕ್ಕನ್ನು ಚಲಾಯಿಸುತ್ತಾರೆ.3. ಸರ್ಕಾರ ಈಗ 26 ಜನರಿಗೆ ತರಾತುರಿಯಲ್ಲಿ ಮನೆಗಳನ್ನು ನೀಡುತ್ತಿರುವುದರ ಹಿಂದಿರುವ ಉದ್ದೇಶವೇನು? ಈ 26 ಜನಕ್ಕೆ ಯಾವ ಮಾನದಂಡದ ಮೇಲೆ ಪುನರ್ವಸತಿ ಕಲ್ಪಿಸುತ್ತಿದೆ? ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯಾ ಎಂಬುದರ ತನಿಖೆಯಾಗಬೇಕು
4. ಹೈಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ವಾದ ಮಾಡಿರುವ ಅಡ್ವೊಕೇಟ್ ಜನರಲ್ ಅವರು ಅರ್ಜಿದಾರರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಹೇಳಿರುವಂತೆಯೇ ಮತ್ತು ನಮ್ಮ ಬಳಿ ಆಧಾರವಾಗಿದ್ದ ಉಪಗ್ರಹ ಆಧಾರಿತ ಫೋಟೋಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುಖಾಂತರ ನಮ್ಮ ವಾದವನ್ನು ಪುಷ್ಟೀಕರಿಸಿದ್ದಾರೆ. ಹೀಗಾಗಿ ನಮ್ಮ ಸತ್ಯ ಶೋಧನಾ ಸಮಿತಿಯನ್ನು ಸರ್ಕಾರ ಈ ಪ್ರಕರಣದಲ್ಲಿ ವಾದಿಗಳನ್ನಾಗಿ ಪರಿಗಣಿಸಬೇಕು