- ಹಿಂದೂ-ಮುಸ್ಲಿಂ ಆಧಾರದಲ್ಲಿ ದೇಶಪ್ರೇಮಿಗಳನ್ನು ನಿರ್ಧರಿಸುವ ವಿಕೃತ ಕಾಲಘಟ್ಟ: ಬರಗೂರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶದಲ್ಲಿ ಇಂದು ಯಾರು ಪ್ರಗತಿಪರ, ಯಾರು ಅಲ್ಲ, ಯಾರು ದೇಶಪ್ರೇಮಿ, ಯಾರು ಅಲ್ಲ ಎಂಬುದನ್ನು ಹಿಂದೂ-ಮುಸ್ಲಿಂ ಆಧಾರದಲ್ಲಿ ನಿರ್ಧರಿಸುವ ವಿಶಿಷ್ಟ, ವಿಕೃತ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.ನಗರದ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಶನಿವಾರ ಎದ್ದೇಳು ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶಪ್ರೇಮ, ದೇಶದ್ರೋಹ, ಸ್ವಾತಂತ್ರ್ಯ, ಸಮಾನತೆ ಎಲ್ಲವನ್ನೂ ಅಪವ್ಯಾಖ್ಯಾನ ಮಾಡುತ್ತಿರುವ ಸಮಯದಲ್ಲಿ ನಾವಿದ್ದೇವೆ ಎಂದರು.
ಧರ್ಮಾಧಾರಿತ ಮಾನದಂಡಗಳನ್ನು ಅನುಸರಿಸುವುದು ಸಮಾನತೆ ಆಶಯವಲ್ಲ. ಸಂವಿಧಾನದ ಅಶಯವೂ ಅಲ್ಲ, ಯಾರು ಜನಸಾಮಾನ್ಯರು, ಸಂವಿಧಾನ ಗೌರವಿಸುತ್ತಾರೋ, ಸಮಾನತೆ, ಸಂವಿಧಾನ ಪರವಾಗಿ ಇರುತ್ತಾರೋ ಅಂತಹವರೇ ನಿಜವಾದ ದೇಶಪ್ರೇಮಿಗಳು. ಎಲ್ಲರೂ ಒಗ್ಗಟ್ಟಾಗಿದ್ದರೆ ಸಾಮಾಜಿಕ ಶಕ್ತಿ ವಿಸ್ತರಿಸಲು ಸಾಧ್ಯ. ಚೈತನ್ಯ ಚಿಲುಮೆಯಾಗಲು ಸಾಧ್ಯ. ಪ್ರೀತಿಯ ತಂಪನ್ನು ಪಸರಿಸಲು ಸಾಧ್ಯ. ಜನಶಕ್ತಿ ಸಂಘಟಿಸುವುದು, ಸಂವಿಧಾನದ ಆಶಯಗಳನ್ನು ಮಾಡುವ ಸಂಕಲ್ಪ ಸಮಾವೇಶ ಇದಾಗಿದೆ ಎಂದರು.ಸಂವಿಧಾನ ಸಂರಕ್ಷಣೆ ಮಾಡಬೇಕೆನ್ನುವ ಸಮಾವೇಶ ಸಂದರ್ಭದಲ್ಲಿ ಪ್ರಶ್ನೆ ಮಾಡುವುದು, ಪ್ರಶ್ನಿಸಿಕೊಳ್ಳುವುದೂ ಮುಖ್ಯ. ಸಂವಿಧಾನವನ್ನು ಸದಾ ಕೈಯಲ್ಲಿಡಿದು ತೋರಿಸುವ ಪಡೆ ಒಂದು ಕಡೆಯಾದರೆ, ಮತ್ತೊಂದು ಕಡೆ ಸಂವಿಧಾನವನ್ನು ಭಕ್ತಿಯಿಂದ ಕೈಮುಗಿದು, ಭಕ್ತಿ ತೋರಿಸುತ್ತಿರುವ ಪಡೆ ಇದೆ. ಸಂವಿಧಾನ ಸಂರಕ್ಷಕರ ಸಮಾವೇಶ ಪರ್ಯಾಯ ಪಡೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪಕ್ಷಗಳು, ಸಮಾಜದಲ್ಲಿ ಜಾತಿಗಳು, ಧರ್ಮಗಳು ಎಲ್ಲವೂ ಇದೆ. ಜಾತಿ ಜಾತಿವಾದ ಆಗಬಾರದು. ಧರ್ಮ ಮೂಲಭೂತ ಆಗಬಾರದು ಎಂದು ಬರಗೂರು ಅವರು ವಿವರಿಸಿದರು.
ಸಮಿತಿ ಸದಸ್ಯ ನೂರ್ ಶ್ರೀಧರ್ ಮಾತನಾಡಿ, ಪ್ರಚಂಡ ಚಳವಳಿ, ಯುವಜನರ ಸಂಘಟನೆ, ಬೃಹತ್ ಜನಾಂದೋಲನ ಆಗದಿರಲು ಮುಖ್ಯ ಕಾರಣ ನಮ್ಮಲ್ಲಿರುವ ಲೋಪಗಳು. ಅವೆಲ್ಲವನ್ನೂ ಮೀರುವುದಕ್ಕಾಗಿಯೇ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಲಾಗಿದೆ ಎಂದರು.ಹಲವಾರು ಹೋರಾಟ ಮಾಡುತ್ತಿದ್ದರೂ, ಆಳುವವರನ್ನು ಅಲುಗಾಡಿಸಲು ಆಗುತ್ತಿಲ್ಲ. 1 ಲಕ್ಷ ಸಂರಕ್ಷಕರ ಪಡೆ ಕಟ್ಟುವ ಉದ್ದೇಶ ಸಫಲ ಆಗಬೇಕೆಂದರೆ ವೇದಿಕೆ ಮೇಲಿನ ಗಣ್ಯರು, ಸಮಾವೇಶದ ಮುಂದಿರುವ ನಿಮ್ಮೆಲ್ಲರ ಜವಾಬ್ಧಾರಿ ಇದೆ. ನಾವೆಲ್ಲರೂ ಸೇರಿ, ಈ ಜವಾಬ್ಧಾರಿ ಹೊರಬೇಕು. ಪ್ರತಿಯೊಬ್ಬರೂ ತಮ್ಮ ಜೊತೆ 5 ಜನ ಸಂವಿಧಾನ ಸಂರಕ್ಷಕರನ್ನು ತಯಾರು ಮಾಡುವ ತೀರ್ಮಾನ ಮಾಡಿದರೆ, ಎಲ್ಲವೂ ಸಾಧ್ಯ. ಹಾಗಾದಾಗ ಮುಂದಿನ 3 ವರ್ಷದಲ್ಲಿ 1 ಲಕ್ಷ ಪಡೆ ಕಟ್ಟುವ ಗುರಿ ಮುಟ್ಟಬಹುದು ಎಂದು ತಿಳಿಸಿದರು.
ಗುಜರಾತ್ ನ ಯುವ ಹೋರಾಟಗಾರ ಜಿಗ್ನೇಶ್ ಮೇವಾನಿ, ಡಿಎಸ್‌ಎಸ್ ನಾಯಕರಾದ ಎನ್.ವೆಂಕಟೇಶ, ಗುರುಪ್ರಸಾದ್ ಕೆರಗೋಡು, ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಎದ್ದೇಳು ಕರ್ನಾಟಕದ ತಾರಾ ರಾವ್, ಜಮಾತ್ ಎ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಯೂಸೂಫ್ ಖನ್ನಿ, ಸೇಂಟ್ ಜೋಸೆಫ್ ಕಾನೂನು ವಿವಿ ನಿರ್ದೇಶಕ ಫಾದರ್ ಜೆರಾಲ್ಜ್ ಡಿಸೋಜಾ, ಹಿರಿಯ ವಕೀಲ ಅನೀಸ್ ಪಾಷ, ಹೋರಾಟಗಾರರಾದ ಕೆ.ಎಲ್. ಅಶೋಕ, ಎಚ್.ಮಲ್ಲೇಶ, ಹೆಗ್ಗೆರೆ ರಂಗಪ್ಪ, ಎಂ.ಕರಿಬಸಪ್ಪ, ಸತೀಶ ಅರವಿಂದ, ನಿಜಾಮುದ್ದೀನ್, ಜಬೀನಾ ಖಾನಂ, ಕುಂದುವಾಡ ಮಂಜುನಾಥ, ರೈತ ಸಂಘದ ಹೊನ್ನೂರು ಮುನಿಯಪ್ಪ ಇತರರು ಇದ್ದರು.- - -
-(ಫೋಟೋ ಬರಲಿದೆ)