ಸಿರುಗುಪ್ಪ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ವ್ಯವಹಾರಿಕ ಜ್ಞಾನ ಗಳಿಸಬೇಕು. ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಿರುವ ಆಹಾರ ಮೇಳ ಉತ್ತೇಜಿತವಾಗಿದೆ ಎಂದು ಸಿಡಿಪಿಒ ಪ್ರದೀಪಕುಮಾರ್ ಎಂದು ತಿಳಿಸಿದರು.
ನಗರದ ಸಾಧನ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಮಕ್ಕಳ ಆಹಾರ ಮೇಳದಿಂದ ಮಕ್ಕಳಿಗೆ ವ್ಯವಹಾರ ಜ್ಞಾನದ ಜತೆಗೆ ಅಡುಗೆ ಮಾಡುವ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡುತ್ತದೆ. ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಪೋಷಕರು ಅಡುಗೆ ಮಾಡುವಾಗ ಮಕ್ಕಳು ಸಹಾಯ ಮಾಡುವ ಮನೋಭಾವ ಬೆಳೆಯುತ್ತದೆ. ವಿದ್ಯಾರ್ಥಿಗಳು ಇಂಥಹ ಕಾರ್ಯಕ್ರಮಗಳ ಮೂಲಕ ತರಕಾರಿ ಹಾಗೂ ಅಡುಗೆ ಪದಾರ್ಥಗಳ ಬಗ್ಗೆ ವಿಶೇಷ ಆಸಕ್ತಿ ಮೂಡಲು ಸಹಕಾರಿಯಾಗಲಿದೆ ಎಂದು ಹೇಳಿದರು.ಶಾಲೆಯ ವ್ಯವಸ್ಥಾಪಕ ಎನ್.ಲಿಂಗನಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಆಹಾರ ಮೇಳ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ನಿತ್ಯವೂ ನಡೆಯುವ ವ್ಯವಹಾರವನ್ನು ಅವಲೋಕನ ಮಾಡಿದರೆ ಆಹಾರ ಉತ್ಪಾದನೆ ಬಳಕೆ ಕುರಿತು ಅರಿವು ಹೊಂದಬಹುದು. ಅನ್ನದಾತನ ಶ್ರಮದ ಅರಿವು ಮುಖ್ಯ. ಆಹಾರ ಸೇವನೆಗೆ ಮುನ್ನ ಅನ್ನದಾತನ ಶ್ರಮ ನೆನಪು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ನಿಲಯ ಪಾಲಕಿ ಅಮರೇಶ್ವರಿ ಮಾತನಾಡಿ, ಈ ಶಾಲೆಯಲ್ಲಿ ಆಯೋಜಿಸಿರುವ ಆಹಾರ ಮೇಳ ವಿದ್ಯಾರ್ಥಿಗಳಲ್ಲಿ ಹೊಸ ಬದಲಾವಣೆ ತರುವ ಜ್ಞಾನವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಆಹಾರ ಪದ್ದತಿಯನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.ಶಾಲೆಯ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಭಾಗವಹಿಸಿ ವಿವಿಧ ಬಗೆಯ ಖಾದ್ಯಗಳನ್ನು ಸಿದ್ದಪಡಿಸಿ ಸಾಲಾಗಿ ಟೇಬಲ್‌ಗಳ ಮೇಲೆ ನಿಂತು ಪ್ರದರ್ಶಿಸಿದರು.
ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಆಹಾರ ಮೇಳದಲ್ಲಿ ಪಾಲ್ಗೊಂಡು ಮಕ್ಕಳು ಸ್ವಯಂಪ್ರೇರಿತವಾಗಿ ಮಾಡಿದ ವಿವಿಧ ಬಗೆಯ ಖಾದ್ಯಗಳನ್ನು ಖರೀದಿಸಿ ಬೆಂಬಲಿಸಿದರು. ಸುಮಾರು ರೂ.೧೦ಸಾವಿರ ವ್ಯಾಪಾರ ನಡೆಯಿತು.ಮುಖ್ಯಗುರು ಗಂಗಾ ಭವಾನಿ, ಸಿ.ಆರ್.ಪಿ ಮಾರುತಿ, ಕಾರ್ಯಕ್ರಮದ ವ್ಯವಸ್ಥಾಪಕಿ ಶಿಲ್ಪ ಹಾಗೂ ಶಿಕ್ಷಕರಾದ ನಂದಿನಿ, ಶಬಾರ ಭಾನು, ಕಲ್ಪನ, ಪವಿತ್ರ, ಪ್ರಸನ್ನ ಕುಮಾರ್ ಮತ್ತು ಮಕ್ಕಳ ಪೋಷಕರು ಭಾಗವಹಿಸಿದರು.