ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಆಹಾರದ ಕೊರತೆ ಇತ್ತು. ಇದೀಗ ಕೊರತೆ ಇಲ್ಲ, ಆಹಾರ ನಮ್ಮ ಹಕ್ಕಾಗಿದ್ದು, ಆಹಾರ ಭದ್ರತೆ ಒದಗಿಸಲಾಗಿದೆ. ಆಹಾರ ಭದ್ರತಾ ಕಾಯ್ದೆಯು ಕಾನೂನಾತ್ಮಕ ಭದ್ರತೆ ನೀಡಿದ್ದು, ಸರ್ಕಾರದ ವಿವಿಧ ಆಹಾರ ಯೋಜನೆಗಳ ಪರಿಣಾಮಕಾರಿ ಅನುಷ್ಟಾನದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಎಲ್ಲಾ ಹಂತದಲ್ಲಿಯೂ ಕಾಯ್ದೆಯು ಸಮರ್ಪಕವಾಗಿ ಅನುಷ್ಟಾನವಾಗಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.ನ್ಯಾಯಬೆಲೆ ಅಂಗಡಿಗಳ ಕುರಿತು ಹೆಚ್ಚಿನ ದೂರುಗಳಿವೆ. ನ್ಯಾಯಬೆಲೆ ಅಂಗಡಿಗಳು ಸಮರ್ಪಕವಾಗಿ ಪಡಿತರ ವಿತರಣೆ ಮಾಡಬೇಕು. ತಿಂಗಳಲ್ಲಿ 26 ದಿನಗಳ ಕಾಲ ಅಥವಾ ಎಲ್ಲ ಪಡಿತರದಾರರಿಗೆ ಪಡಿತರ ವಿತರಣೆ ಆಗುವವರೆಗೆ ತೆರೆದಿರಬೇಕು ಎಂದು ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಬಯೋಮೆಟ್ರಿಕ್ ಸಮಸ್ಯೆ ಹೇಳಬಾರದು. ಮ್ಯಾನುವಲ್ ಆಗಿ ಬರೆದು ಪಡಿತರ ನೀಡಬೇಕು. ಪಿಎಂ ಪೋಷಣ್ ಅಭಿಯಾನ, ಬಿಸಿಯೂಟ ಯೋಜನೆ, ವಸತಿ ನಿಲಯಗಳಲ್ಲಿ ಆಹಾರ, ಅಂಗನವಾಡಿಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ನೀಡುವ ಪೌಷ್ಟಿಕಾಂಶ ಆಹಾರ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಸೇರಿದಂತೆ ಸರ್ಕಾರ ನೀಡುವ ಎಲ್ಲ ಆಹಾರ ಯೋಜನೆಗಳು ಸಮರ್ಪಕವಾಗಿ ಮತ್ತು ಗುಣಮಟ್ಟದೊಂದಿಗೆ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಭೇಟಿ ಮತ್ತು ಪರಿಶೀಲನೆ ನಡೆಸಲಾಗುವುದು ಎಂದರು.
ನ್ಯಾಯಬೆಲೆ ಅಂಗಡಿಗಳ ಅಮಾನತಿಗೆ ಸೂಚನೆ: ಶಿವಮೊಗ್ಗ ನಗರದಲ್ಲಿ ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಹಲವಾರು ಲೋಪದೋಷಗಳು ಕಂಡು ಬಂದಿವೆ. ನ್ಯಾಯಬೆಲೆ ಅಂಗಡಿಗೆ ನಿಗದಿತ ವೇಳೆಯೊಳಗೆ ಪಡಿತರ ತಂದು ವಿತರಿಸದೇ ಇದ್ದ ಹಾಗೂ ಇತರೆ ಲೋಪದೋಷ ಕಂಡು ಬಂದ ಅಶೋಕ ನಗರದ ಮತ್ತು ಶೇಷಾದ್ರಿಪುರಂ ಹಾಗೂ ಅಣ್ಣಾನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲು ನಿರ್ದೇಶನ ನೀಡಿದ್ದು, ಗುತ್ಯಪ್ಪ ಕಾಲೋನಿ ಸೇರಿದಂತೆ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ ಲೋಪದೋಷ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದ ಅವರು ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಕುರಿತು ಸಂಪೂರ್ಣವಾದ ಮಾಹಿತಿಯುಳ್ಳ ಫಲಕ ಅಳವಡಿಸುವಂತೆ ಸೂಚಿಸಲಾಗಿದೆ ಎಂದರು.
ಗೋಷ್ಟಿಯಲ್ಲಿ ಆಯೋಗದ ಸದಸ್ಯ ಲಿಂಗರಾಜ ಕೋಟೆ, ಮಾರುತಿ ಎಂ ದೊಡ್ಡಲಿಂಗಣ್ಣವರ, ಸುಮಂತ ರಾವ್, ಕೆ.ಎಸ್. ವಿಜಯಲಕ್ಷ್ಮಿ ಹಾಜರಿದ್ದರು.