ಕನ್ನಡಪ್ರಭ ವಾರ್ತೆ ಹಾಸನ
ಗ್ರಾಮಸ್ಥರ ಪ್ರಕಾರ, ಈಗಾಗಲೇ ಈ ಪ್ರದೇಶದಲ್ಲಿ ನಾಲ್ಕು ಕಲ್ಲುಗಣಿಗಳು ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಮಾಲಿನ್ಯ, ಭೂಮಿ ನಾಶ, ಕುಡಿಯುವ ನೀರಿನ ದೂಷಣೆ ಮತ್ತು ರೈತರ ಜೀವನೋಪಾಯಕ್ಕೆ ಭಾರೀ ಹೊಡೆತ ಉಂಟಾಗಿದೆ. ಇದ್ರಲ್ಲೂ ಮತ್ತೆ ನಾಲ್ಕು ಹೊಸ ಗಣಿಗಾರಿಕೆ ಪರವಾನಗಿಗಳನ್ನು ನೀಡಲು ತಹಸೀಲ್ದಾರ್ ಮುಂದಾಗಿರುವುದು ಆತಂಕಕಾರಿ ಎಂದು ಅವರು ಆರೋಪಿಸಿದ್ದಾರೆ. ಸರ್ವೆ ನಂ. ೧ಪಿ೧, ೧ಪಿ೨ ಮತ್ತು ೧೦೪ರಲ್ಲಿ ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಸ್ಪಷ್ಟವಾಗಿ ಆಗ್ರಹಿಸಿದ್ದಾರೆ.ಈ ಪ್ರದೇಶದಲ್ಲಿ ಗೋಮಾಳ ಜಮೀನಿನಲ್ಲಿಯೇ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದರೆ “ಮೇಲಿಂದ ತೀರ್ಮಾನವಾಗಿದೆ” ಎಂಬ ಉಡಾಫೆ ಉತ್ತರ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಂಗೇನಹಳ್ಳಿ ಏತ ನೀರಾವರಿ ಯೋಜನೆ ಇದೇ ಜಾಗದಲ್ಲಿ ನಿರ್ಮಾಣವಾಗಬೇಕೆಂದು ಸರ್ಕಾರ ಹಾಗೂ ಆಗಿನ ಶಾಸಕ ಎ. ಮಂಜು ಅವರು ಗುದ್ದಲಿಪೂಜೆ ನಡೆಸಿದ್ದರು. ಈ ಯೋಜನೆಯಿಂದ ೬೦- ೭೦ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶವಿದ್ದು, ಈ ವಿಷಯ ತಿಳಿದಿದ್ದರೂ ಸಹ ಗಣಿಗಾರಿಕೆಗೆ ಅನುಮತಿ ನೀಡಿರುವುದು ಎಷ್ಟು ನ್ಯಾಯಸಮ್ಮತ ಎಂದು ಅವರು ಪ್ರಶ್ನಿಸಿದರು. ಗ್ರಾಮದ ರೈತರು ಅಜ್ಞಾನಿಗಳನ್ನು ಬಳಸಿ “ನಿಮ್ಮ ಮಕ್ಕಳಿಗೆ ಕೆಲಸ ಕೊಡುತ್ತೇವೆ, ಮನೆ ಕಟ್ಟಿಸಿಕೊಡುತ್ತೇವೆ” ಎಂಬ ಸುಳ್ಳು ಭರವಸೆ ನೀಡಿ ಸಹಿಗಳನ್ನು ಸಂಗ್ರಹಿಸಿ, ಕಾನೂನಿನ ಪ್ರಕಾರ ೧೫ ವರ್ಷ ಪರಭಾರೆ ಮಾಡಬಾರದೆಂಬ ನಿಯಮ ಇದ್ದರೂ ೩?೪ ವರ್ಷದಲ್ಲೇ ಜಮೀನು ಗಣಿಮಾಲೀಕರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕೆಲ ರೈತರಿಂದ ದುರಸ್ತಿ ಮಾಡಲು ೧ ರಿಂದ ೨ ಲಕ್ಷ ರೂಪಾಯಿ ಹಣ ಕೇಳಲಾಗಿದ್ದು, ಹಣ ಕೊಡದ ಕಾರಣ ಕೆಲವರಿಗೆ ಮಂಜೂರಾತಿ ನೀಡದೇ ವಂಚಿಸಲಾಗಿದೆ ಎಂದು ದೂರಿದ್ದಾರೆ.೬೦-೭೦ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಬಡ ರೈತರಿಗೆ ಸರ್ಕಾರದ ಆದೇಶ ಇದ್ದರೂ ಜಮೀನು ಮಂಜೂರು ಮಾಡದೆ, ಅದೇ ಸರ್ಕಾರಿ ಜಾಗವನ್ನು ಮತ್ತೆ ಕ್ರಷರ್ ಮತ್ತು ಗಣಿಗಾರಿಕೆಗಾಗಿ ಮಂಜೂರು ಮಾಡಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದೇ ಗಣಿಮಾಲೀಕರಿಗೆ ಸರ್ವೆ ನಂ. ೧೭ರಲ್ಲಿ ೩ ಎಕರೆ, ಸರ್ವೆ ನಂ. ೨ರಲ್ಲಿ ೫ ಎಕರೆ ಹಾಗೂ ಸರ್ವೆ ನಂ. ೧೦೨ರಲ್ಲಿ ೪ ಎಕರೆ ಜಮೀನು ದುರಸ್ತಿ ಮಾಡಿಕೊಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ಗಣಿಗಾರಿಕೆಯಿಂದ ಉಂಟಾಗುವ ಧೂಳು ಮತ್ತು ವಿಷಕರ್ಮಿತ ನೀರಿನಿಂದ ಜಾನುವಾರುಗಳು ರೋಗಬಾಧಿತವಾಗಿ ಸಾವನ್ನಪ್ಪುತ್ತಿವೆ. ಪರಿಹಾರ ಕೇಳಲು ಹೋದ ರೈತರ ಮೇಲೆ ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ, ಸುಳ್ಳು ಪ್ರಕರಣಗಳು, ಅಟ್ರಾಸಿಟಿ ಕೇಸುಗಳು ಹಾಗೂ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸಿ. ಹಿಂದಲಹಳ್ಳಿ ಗ್ರಾಮದ ಹರಿಜನಾಂಗದ ಯುವಕರು ಶಿವಯ್ಯ ಮತ್ತು ಶಂಕರಯ್ಯ ಎಂಬವರು ರಸ್ತೆ ಮೇಲೆ ಬಿದ್ದ ಎಂ-ಸ್ಯಾಂಡ್ ಮತ್ತು ಜಲ್ಲಿಯಿಂದ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಯಾವುದೇ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದರು.ವಿಷಕರ್ಮಿತ ನೀರನ್ನು ಕೆರೆಗಳಿಗೆ ಬಿಡಲಾಗುತ್ತಿದ್ದು, ಕುಡಿಯುವ ನೀರಿನ ಬೋರ್‌ವೆಲ್‌ಗಳು ದೂಷಿತಗೊಂಡಿವೆ. ಇದರಿಂದ ಗ್ರಾಮಸ್ಥರು ಗಂಟಲು ನೋವು, ಕೆಮ್ಮು, ಜ್ವರ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೂ ಸಂಬಂಧಪಟ್ಟ ತಾಲೂಕು ಆಡಳಿತ ಹಾಗೂ ಇಲಾಖಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೀಗಾಗಿ ಸಿ. ಹಿಂದಲಹಳ್ಳಿ, ತಾತನಹಳ್ಳಿ, ದೊಡ್ಡಕಾಡನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಒಟ್ಟಾಗಿ ಜಂಟಿ ಸರ್ವೆ ನಡೆಸಿ, ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ನೀಡಬೇಕು. ಸುಮಾರು ೨೦ ಗ್ರಾಮ ಪಂಚಾಯತಿಗಳ ಜನರಿಗೆ ಅನ್ಯಾಯವಾಗುತ್ತಿರುವುದರಿಂದ, ಗಣಿಗಾರಿಕೆ ಪರವಾನಗಿಗಳನ್ನು ಸಂಪೂರ್ಣವಾಗಿ ರದ್ದುಪಡಿಸಿ, ರೈತರ ಆಸ್ತಿ?ಪಾಸ್ತಿ ಹಾಗೂ ಜೀವನವನ್ನು ರಕ್ಷಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.ಇದೇ ವೇಳೆ ಗ್ರಾಮಸ್ಥರಾದ ಬಾಗೇಗೌಡ, ವೀರಭದ್ರೇಗೌಡ, ನಿಂಗರಾಜು, ದೊಡ್ಡೇಗೌಡ, ರವಿಕುಮಾರ್ ಇತರರು ಉಪಸ್ಥಿತರಿದ್ದರು.