ಫುಟ್‌ಪಾತ್‌ ಒತ್ತುವರಿ: ಪಾಲಿಕೆ ವಿರುದ್ಧ ಹೈಕೋರ್ಟ್‌ ಅಸಮಾಧಾನ

KannadaprabhaNewsNetwork |  
Published : Jan 31, 2024, 02:20 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಫುಟ್‌ಪಾತ್‌ ಒತ್ತುವರಿ ಆದರೂ ಮೌನದಿಂದ ಇರುವ ಬಿಬಿಎಂಪಿ ವಿರುದ್ಧ ಕರ್ನಾಟಕ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸದ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೊರ್ಟ್, ತಕ್ಷಣ ಎಲ್ಲ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ.

ತ್ಯಾಗರಾಜನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಉತ್ತಮ ರಸ್ತೆ ಮತ್ತು ಪಾದಚಾರಿ ಮಾರ್ಗ ಕಲ್ಪಿಸಲು ಬಿಬಿಎಂಪಿ ಸಾರ್ವಜನಿಕರಿಂದ ತೆರಿಗೆ ಸಂಗ್ರಹಿಸುತ್ತಿದೆ. ಆದರೆ, ಪಾಲಿಕೆ ಪಾದಚಾರಿ ಮಾರ್ಗಗಳ ಸುಧಾರಣೆಗೆ ಮುಂದಾಗುತ್ತಿಲ್ಲ. ಕೆಲವರು ಪಾದಚಾರಿ ಮಾರ್ಗವನ್ನು ತಮ್ಮ ವಾಹನಗಳ ನಿಲುಗಡೆಗೆ ಬಳಸುತ್ತಿರುವುದನ್ನು ನೋಡಿಕೊಂಡು ಅಧಿಕಾರಿಗಳು ಮೌನ ವಹಿಸುತ್ತಾರೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ನಗರದಲ್ಲಿ ಎಲ್ಲ ಪಾದಚಾರಿ ಮಾರ್ಗಗಳ ಜಾಗದಲ್ಲಿ ಆಗಿರುವ ಒತ್ತುವರಿಯನ್ನು ತಕ್ಷಣವೇ ತೆರವು ಮಾಡಬೇಕು. ಈ ಸಂಬಂಧ ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆ.1ಕ್ಕೆ ಮುಂದೂಡಿತು.

ಹಾಗೆಯೇ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಬಿಬಿಎಂಪಿಯೊಂದಿಗೆ ಇತರೆ ಯಾವ ಇಲಾಖೆಗಳನ್ನು ಭಾಗಿಮಾಡಬಹುದು. ಆ ಇಲಾಖೆ ಅಧಿಕಾರಿಗಳಿಗೆ ಯಾವ ರೀತಿಯ ನಿರ್ದೇಶನ ನೀಡಬಹುದು ಎಂಬುದರ ಕುರಿತು ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿತು.

ಪ್ರಕರಣವೇನು?:

ಪಾದಚಾರಿ ಮಾರ್ಗದಲ್ಲಿದ್ದ ಬಿಡಾಡಿ ದನಗಳ ದಾಳಿಗೆ ತುತ್ತಾಗಿ ತಮ್ಮ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತ್ಯಾಗರಾಜನಗರದಲ್ಲಿ ಸಾಕಷ್ಟು ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ವಾಹನ ನಿಲುಗಡೆಗೆ ಇರುವ ಸ್ಥಳದಲ್ಲಿ ವಾಣಿಜ್ಯ ವ್ಯವಹಾರಕ್ಕಾಗಿ ಅಧಿಕಾರಿಗಳು ಅನುಮತಿ ನೀಡಲಾಗಿದೆ. ಆದ್ದರಿಂದ ಪಾದಚಾರಿ ಒತ್ತುವರಿ ಮಾಡಿಕೊಂಡಿರುವ ಭಾಗಗಳನ್ನು ಪರಿಶೀಲಿಸಲು ಕೋರ್ಟ್ ಕಮಿಷನರ್ ನೇಮಕ ಮಾಡಬೇಕು. ಜತೆಗೆ, ಅಪಘಾತದಿಂದ ತಮ್ಮ ತಾಯಿ ನರಳಿರುವುದಕ್ಕೆ ₹15 ಲಕ್ಷ ಪರಿಹಾರ ನೀಡಲು ಪಾಲಿಕೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...