ಫುಟ್‌ಪಾತ್‌ಗಳು ಜನರ ಓಡಾಟಕ್ಕೆ ಯೋಗ್ಯವಲ್ಲ: ಬಿಎನ್‌ಪಿನಿಂದ ವರದಿ

KannadaprabhaNewsNetwork |  
Published : May 05, 2026, 02:00 AM IST
ನಗರದ ಪಾದಚಾರಿ ಮಾರ್ಗವನ್ನು ದುರಸ್ತಿ ಮಾಡುತ್ತಿರುವುದು. | Kannada Prabha

ಸಾರಾಂಶ

ನಗರದ ಪಾದಚಾರಿ ಮಾರ್ಗಗಳು ಜನರ ಸುರಕ್ಷಿತ ಓಡಾಟಕ್ಕೆ ಯೋಗ್ಯವಲ್ಲ ಎಂದು ಬೆಂಗಳೂರು ನವನಿರ್ಮಾಣ ಪಾರ್ಟಿ (ಬಿಎನ್‌ಪಿ) ಸಮೀಕ್ಷಾ ವರದಿ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪಾದಚಾರಿ ಮಾರ್ಗಗಳು ಜನರ ಸುರಕ್ಷಿತ ಓಡಾಟಕ್ಕೆ ಯೋಗ್ಯವಲ್ಲ ಎಂದು ಬೆಂಗಳೂರು ನವನಿರ್ಮಾಣ ಪಾರ್ಟಿ (ಬಿಎನ್‌ಪಿ) ಸಮೀಕ್ಷಾ ವರದಿ ತಿಳಿಸಿದೆ.

ಏಳು ವಾರ್ಡ್‌ಗಳಲ್ಲಿ ಪಾದಚಾರಿ ಮಾರ್ಗಗಳ ಸ್ಥಿತಿಗತಿ ಕುರಿತು ನಡೆಸಿದ ಸಮೀಕ್ಷೆಯ ಪ್ರಕಾರ, ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೂ ನಾಗರಿಕರು ಕಷ್ಟಪಟ್ಟು ಅನಿವಾರ್ಯವಾಗಿ ಓಡಾಡುತ್ತಿದ್ದಾರೆ.

ಎಚ್‌ಎಸ್‌ಆರ್ ಲೇಔಟ್, ಕಲ್ಯಾಣ ನಗರ, ಬಿಳೇಕಹಳ್ಳಿ, ಯಲೇನಹಳ್ಳಿ, ದೊಡ್ಡಕಾಮನಹಳ್ಳಿ, ಶಾಕಂಬರಿನಗರ ಮತ್ತು ಸಾರಕ್ಕಿ ವಾರ್ಡ್‌ಗಳ ಏರಿಯಾ ಸಭಾಗಳು ನಡೆಸಿದ ಸುಮಾರು 5.25 ಕಿ.ಮೀ ಮಾರ್ಗದಲ್ಲಿ ಏಳು ವ್ಯವಸ್ಥಿತ ಸಮೀಕ್ಷೆಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಶೇ.100 ರಷ್ಟು ಪಾದಚಾರಿ ಮಾರ್ಗಗಳು ಕನಿಷ್ಠ ದರ್ಜೆಯ ಮಾನದಂಡಗಳನ್ನು ಪೂರೈಸುವಲ್ಲಿಯೂ ವಿಫಲವಾಗಿರುವುದು ಕಂಡು ಬಂದಿದೆ.

ರಸ್ತೆಯಲ್ಲೇ ಓಡಾಟ:

ಓಡಾಡಲು ಸರಿಯಾದ ಹಾದಿಯಿಲ್ಲದೇ ಜನರು ರಸ್ತೆಯಲ್ಲೇ ಓಡಾಡಬೇಕಾಗುತ್ತದೆ. ಸಮೀಕ್ಷೆ ನಡೆಸಿದ ಶೇ.83ರಷ್ಟು ಭಾಗಗಳಲ್ಲಿ ಪಾದಚಾರಿ ಮಾರ್ಗಗಳು ಅಸ್ತಿತ್ವದಲ್ಲಿದ್ದರೂ, ಅವುಗಳಲ್ಲಿ ಒಂದೂ ಸರಿಯಾಗಿಲ್ಲ. ಇನ್ನು ಶೇ. 67ರಷ್ಟು ಮಾರ್ಗಗಳಲ್ಲಿ ನೀರು ನಿಂತಿರುವುದು, ರಾತ್ರಿ ವೇಳೆ ಸರಿಯಾಗಿ ಬೆಳಕು ಇಲ್ಲದಿರುವುದು ಅಥವಾ ಬೀದಿ ದೀಪಗಳೇ ಇಲ್ಲದಿರುವುದು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ವಿಕಲಚೇತನ ಸ್ನೇಹಿ ಮಾರ್ಗವಿಲ್ಲ:

ವಿಕಲಚೇತನ ಸ್ನೇಹಿ ಪಾದಚಾರಿ ಮಾರ್ಗವಂತೂ ಎಲ್ಲಿಯೂ ಕಂಡುಬಂದಿಲ್ಲ. ಅಲ್ಲದೆ, ಶೇ. 83ರಷ್ಟು ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಕಟ್ಟಡ ಅವಶೇಷ, ಕಸ ಎಸೆದಿರುವುದು ಕಂಡು ಬಂದಿದೆ ಎಂದು ಬಿಎನ್‌ಪಿ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಎನ್‌ಪಿ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್, ನಗರದ ಪಾದಚಾರಿಗಳ ಸುರಕ್ಷತೆ ಬಗ್ಗೆ ಸ್ಥಳೀಯ ಅಧಿಕಾರಿಗಳಿಗಿರುವ ನಿರ್ಲಕ್ಷ್ಯವನ್ನು ಈ ಸಮೀಕ್ಷಾ ವರದಿ ಬಯಲಿಗೆಳೆದಿದೆ. ತಕ್ಷಣವೇ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಸೂಕ್ತ ನಿರ್ವಹಣೆ ಮಾಡಬೇಕು ಎಂದು ಪಾಲಿಕೆಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯ ಮಾರಾಟ: 13 ವರ್ಷದ ದಾಖಲೆ ಉಡೀಸ್‌!
ಆರೋಗ್ಯ ಇಲಾಖೆ ಅಧಿಕಾರಿ, ನೌಕರರ ನಿಸ್ವಾರ್ಥ ಸೇವೆ ಸ್ಮರಿಸಬೇಕು: ಕೆ.ಎಸ್.ಆನಂದ್