ಗ್ಯಾರಂಟಿಗೆ ಫುಲ್‌ ಅಂಕ, ಇಲ್ಲ ಆಡಳಿತ ವಿರೋಧಿ ಅಲೆ ಆತಂಕ

KannadaprabhaNewsNetwork |  
Published : May 05, 2026, 02:00 AM IST
ಚನ್ನರಾಯಪಟ್ಟಣ ರೋಟರಿ ಕ್ಲಬ್‌ಗೆ ಜಿಲ್ಲಾ ಗವರರ್ ಕೆ.ಪಾಲಾಕ್ಷ ಭೇಟಿ ನೀಡಿದ್ದವೇಳೆ ಪ್ರತಿಭಾವಂತ ಮಕ್ಕಳನ್ನು ತಾಲೂಕು ಕ್ಲಬ್ ನ ಅಧ್ಯಕ್ಷೆ ಎನ್.ಬಿ.ಜ್ಯೋತಿಶ್ರೀನಿವಾಸ್, ಗಣ್ಯರು ಅಭಿನಂದಿಸಿದರು. | Kannada Prabha

ಸಾರಾಂಶ

ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಗೆದ್ದು ಬೀಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಗೆದ್ದು ಬೀಗಿದೆ. ಕಾಂಗ್ರೆಸ್‌ ವಿರುದ್ಧ ಸದ್ಯಕ್ಕೆ ಆಡಳಿತ ವಿರೋಧಿ ಅಲೆ ಇಲ್ಲ ಎಂಬ ಸಂದೇಶವನ್ನು ಈ ಫಲಿತಾಂಶ ರವಾನಿಸಿದ್ದು, ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ ಹರಿದುಬಂದ ಮತ ಪ್ರಮಾಣ ನೋಡಿದರೆ ಗ್ಯಾರಂಟಿಗಳಿಗೆ ಮತದಾರರು ಪೂರ್ಣ ಅಂಕ ನೀಡಿದಂತಾಗಿದೆ.

ಮತ್ತೊಂದೆಡೆ, ದಾವಣಗೆರೆಯಲ್ಲಿ ಗೆಲುವಿನ ದಡ ದಾಟಿದ್ದರೂ ಗೆಲುವಿನ ಅಂತರ ಕಡಿಮೆಯಾಗಿರುವುದು ಹಾಗೂ ಅಲ್ಪಸಂಖ್ಯಾತರ ಮತಗಳು ಚದುರಿರುವುದು ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆಯಾಗಿದೆ. ಆದರೂ ಕೊನೇ ಕ್ಷಣದಲ್ಲಿ ಭಿನ್ನಮತಕ್ಕೆ ಮುಲಾಮು ಹಚ್ಚಿ ದಾವಣಗೆರೆ ದಕ್ಷಿಣದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್‌, ಶಾಸಕ ರಿಜ್ವಾನ್‌ ಅರ್ಷದ್‌ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಇದು ಭಿನ್ನಮತಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ ಅಲ್ಪಸಂಖ್ಯಾತ ನಾಯಕರಿಗೆ ಹಿನ್ನಡೆ ಎನ್ನಲಾಗಿದೆ. ಇನ್ನು ಎರಡೂ ಕ್ಷೇತ್ರಗಳಲ್ಲಿ ಪಕ್ಷ ಸೋತರೆ ಅಧಿಕಾರ ಹಸ್ತಾಂತರ ವಿಷಯ ಮುನ್ನೆಲೆಗೆ ಬರಲಿವೆ ಎಂಬ ವಿಶ್ಲೇಷಣೆಗಳು ತಲೆಕೆಳಗಾಗಿದೆ. ಉಪಚುನಾವಣೆ ಫಲಿತಾಂಶದ ಪ್ರಭಾವ ರಾಜಕೀಯ ಬೆಳವಣಿಗೆಗಳಿಗೆ ಮುನ್ನುಡಿ ಬರೆಯುವ ವಿಚಾರದಲ್ಲಿ ನಗಣ್ಯ ಎಂದೇ ಹೇಳಲಾಗುತ್ತಿದೆ.

ದಾವಣಗೆರೆಯಲ್ಲಿ ಗೆಲುವಿನ ದಡ ಸೇರಿದ ಕೈ:

ಉಪಚುನಾವಣೆ ವೇಳೆ ದಾವಣಗೆರೆ ದಕ್ಷಿಣದ ಕೈ ಟಿಕೆಟ್‌ಗೆ ಅಲ್ಪಸಂಖ್ಯಾತರು ಹಾಗೂ ಶಾಮನೂರು ಕುಟುಂಬ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ತೀವ್ರ ತಿಕ್ಕಾಟ ಉಂಟಾಗಿತ್ತು. ಸಮರ್ಥ್‌ ಶಾಮನೂರಿಗೆ ಟಿಕೆಟ್‌ ಘೋಷಿಸಿದ್ದರೂ ಅಲ್ಪಸಂಖ್ಯಾತರು ಬಂಡಾಯದ ಬಾವುಟ ಹಾರಿಸಿದ್ದರು. ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರು ಕ್ಷೇತ್ರದಿಂದ ಅಂತರ ಕಾಯ್ದುಕೊಂಡು ಪರೋಕ್ಷವಾಗಿ ಬಂಡಾಯದ ಸಂದೇಶ ನೀಡಿದ್ದರು. ಪರಿಣಾಮ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶಾಮನೂರು ಅವರು 27,888 ಮತಗಳ ಅಂತರದಿಂದ ಗೆದ್ದಿದ್ದರೂ, ಉಪಚುನಾವಣೆಯಲ್ಲಿ ಸಮರ್ಥ್ ಕೇವಲ 5,708 ಮತಗಳ ಕಡಿಮೆ ಅಂತರದಿಂದ ಗೆದ್ದಿದ್ದಾರೆ. ಅನುಕಂಪದ ಅಲೆ, ಸರ್ಕಾರದ ಬಲ, ಸಂಪನ್ಮೂಲ ಎಲ್ಲವೂ ಇದ್ದರೂ ಗೆಲುವಿನ ಅಂತರ ಭಾರೀ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ವಿಶ್ಲೇಷಣೆಯೂ ಶುರುವಾಗಿದೆ.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್‌ ನಾಮಪತ್ರ ಸಲ್ಲಿಸಿದ್ದರೂ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ ಸಾದಿಕ್‌ಗೆ 47 ಮತ ಮಾತ್ರ ಬಂದಿದ್ದು, ಅವರು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಇಲ್ಲಿ ಅಲ್ಪಸಂಖ್ಯಾತರ ಮತ ಭಾರೀ ಪ್ರಮಾಣದಲ್ಲಿ ವಿಭಜನೆ ಆಗುವುದನ್ನು ತಡೆಯಲು ಸಲೀಂ ಹಾಗೂ ರಿಜ್ವಾನ್ ಅವರ ಆಪರೇಷನ್‌ ಅತ್ಯಂತ ನಿರ್ಣಾಯಕ ರೀತಿಯಲ್ಲಿ ಕೆಲಸ ಮಾಡಿತು ಎಂದೇ ವಿಶ್ಲೇಷಿಸಲಾಗಿದೆ. ಜತೆಗೆ, ಸಿಎಂರ ನಿರ್ದೇಶನ ಮೇರೆಗೆ ಸಚಿವ ಜಮೀರ್ ಅಹ್ಮದ್ ಅವರು ಒಂದು ದಿನ ಕ್ಷೇತ್ರದಲ್ಲಿ ಪ್ರಚಾರವನ್ನೂ ನಡೆಸಿದ್ದರು.

ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ 22,900 ಮತ:

ಉಳಿದಂತೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೆಂದು ಕಾಂಗ್ರೆಸ್‌ ನಾಯಕರೇ ಪಟ್ಟು ಹಿಡಿದಿದ್ದರಿಂದ ಅಲ್ಪಸಂಖ್ಯಾತರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧದ ಅಭಿಪ್ರಾಯ ಮೂಡುವಂತಾಯಿತು. ಇದರಿಂದ ಈ ಬಾರಿ ಎಸ್‌ಡಿಪಿಐ ಅಭ್ಯರ್ಥಿ 18,975 ಮತ ಪಡೆದಿದ್ದು, 2023ರ ಚುನಾವಣೆಯಲ್ಲಿ ಎಸ್‌ಡಿಪಿಐ ಕೇವಲ 1311 (ಶೇ.0.9) ಪಡೆದಿತ್ತು. ಉಪಚುನಾವಣೆಯಲ್ಲಿ ಎಸ್‌ಡಿಪಿಐ ಸೇರಿ ಅಲ್ಪಸಂಖ್ಯಾತ ಸಮುದಾಯದಿಂದ 14 ಅಭ್ಯರ್ಥಿಗಳು ಚುನಾವಣಗೆ ಸ್ಪರ್ಧಿಸಿದ್ದರು. 22,900 ಮತಗಳು ಅವರ ಪಾಲಾಗಿವೆ.

ಬಾಗಲಕೋಟೆಯಲ್ಲಿ ಭರ್ಜರಿ ಗೆಲುವು:

ಇದಕ್ಕೆ ತದ್ವಿರುದ್ಧವಾಗಿ ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. 2023ರಲ್ಲಿ ಎಚ್‌.ವೈ.ಮೇಟಿ ಅವರು 5,878 ಮತಗಳ ಕಡಿಮೆ ಅಂತರದಿಂದ ಮಾತ್ರ ಗೆದ್ದಿದ್ದು, ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಅವರು 22,332ಗಳ ಅಂತರದಿಂದ ಗೆದ್ದಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮುನ್ನಡೆ ಸಿಕ್ಕಿದ್ದು, ಇದರಿಂದ ಸಿದ್ದರಾಮಯ್ಯ ಅವರ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜನ ಉತ್ತಮ ಅಭಿಪ್ರಾಯ ಹೊಂದಿರುವುದಾಗಿ ವಿಶ್ಲೇಷಿಸಲಾಗಿದೆ. ಜತೆಗೆ ಬಾಗಲಕೋಟೆ ಗೆಲುವು ಸಿದ್ದರಾಮಯ್ಯ ತಂಡದ ಪ್ರಯತ್ನದ ಫಲ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಈ ಉಪ ಚುನಾವಣೆ ಫಲಿತಾಂಶದ ಮೇಲೆ ಪಕ್ಷದ ಆಂತರಿಕ ವಿಪ್ಲವಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ನಾಯಕತ್ವ ಬದಲಾವಣೆ ವಿಚಾರ ಹೈಕಮಾಂಡ್‌ ಮನದಾಳ ಏನಿದೆಯೋ ಎಂಬುದರ ಮೇಲೆ ಅವಲಂಬಿತವಾಗಿದೆಯೇ ಹೊರತು ಉಪ ಚುನಾವಣೆ ಫಲಿತಾಂಶಕ್ಕೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲದಂತಾಗಿದೆ.

ಎಸ್‌ಡಿಪಿಐ ಹೆಚ್ಚಿನ ಮತಗಳಿಸಿದ ಬೆನ್ನಲ್ಲೇ ಅಬ್ದುಲ್‌ ಜಬ್ಬಾರ್‌ ಅವರು ಎಸ್‌ಡಿಪಿಐಗೆ ಹಣ ನೀಡಿದ್ದಾರೆ ಎಂಬ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರ ಆರೋಪ ಮುನ್ನೆಲೆಗೆ ಬಂದಿದೆ. ಹೀಗಾಗಿ ಹಲವು ರೀತಿಯ ವ್ಯಾಖ್ಯಾನಗಳು ಶುರುವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯ ಮಾರಾಟ: 13 ವರ್ಷದ ದಾಖಲೆ ಉಡೀಸ್‌!
ಆರೋಗ್ಯ ಇಲಾಖೆ ಅಧಿಕಾರಿ, ನೌಕರರ ನಿಸ್ವಾರ್ಥ ಸೇವೆ ಸ್ಮರಿಸಬೇಕು: ಕೆ.ಎಸ್.ಆನಂದ್