ಹಳಿಯಾಳ:
ಜಿಲ್ಲೆಯಲ್ಲಿನ ಬುಡಕಟ್ಟು ಸಿದ್ದಿ ಸಮುದಾಯವನ್ನು ಈ ಹಿಂದೇ ನಮ್ಮ ಸರ್ಕಾರವೇ ಪರಿಶಿಷ್ಟ ಪಂಗಡಕ್ಕೆ ಸೇರಿಸಿತ್ತು. ಅದೇ ಪ್ರಕಾರ ಈಗ ದನಗರ ಗೌಳಿ ಸಮುದಾಯವನ್ನು ಸೇರಿಸುವ ಪ್ರಯತ್ನ ಪ್ರಗತಿಯಲ್ಲಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ತಾಲೂಕಿನ ತಟ್ಟಿಗೆರೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಗಿರಿಜನೋತ್ಸವ-2023ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಿದ್ದಿ ಜನಾಂಗದ ವಿಶಿಷ್ಟ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆ ಪರಿಚಯಿಸುವ ಕಾರ್ಯವಾಗಬೇಕಾಗಿದೆ. ಆಗ ಮಾತ್ರ ಈ ಕಲೆಗಳಿಗೆ ಹೆಚ್ಚಿನ ಮನ್ನಣೆ, ಗೌರವ ದೊರೆಯಲಿದೆ. ಹಾಗೆಯೇ ದನಗರ ಗೌಳಿ ಸಮುದಾಯದವರ ಕಲೆ, ಸಂಸ್ಕೃತಿ ಅನಾವರಣ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದರು.ಲೊಯೊಲಾ ಸಮೂಹ ಸಂಸ್ಥೆಯ ಗುರು ವಂದನೀಯ ಮೆಲ್ವಿನ್ ಲೊಬೊ ಮಾತನಾಡಿ, ತಮ್ಮ ಸಂಸ್ಥೆಯು ಮುಂಡಗೋಡ, ಹಳಿಯಾಳ ಮತ್ತು ಯಲ್ಲಾಪುರ ವ್ಯಾಪ್ತಿಯಲ್ಲಿನ ಗಿರಿಜನರ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯು ತನ್ನ ಕಾರ್ಯಕ್ಷೇತ್ರವನ್ನು ಜಿಲ್ಲೆಯ ಇತರೇ ತಾಲೂಕಗಳಿಗೂ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಸೇನಬಿ ಬುಡನಸಾಬ್ ಮುಜಾವರ ಹಾಗೂ ಜನಪದಶ್ರೀ ಹಾಗೂ ಜಾನಪದ ಆಕಾಡೆಮಿ ಪ್ರಶಸ್ತಿ ಪುರಸ್ಕೃತೆ ಸೋಬಿನಾ ಕಾಂಬ್ರೆಕರ ಅವರನ್ನು ಸನ್ಮಾನಿಸಲಾಯಿತು.ವಂದನೀಯ ಗುರು ಅನಿಲ್ ಡಿಸೋಜ್, ಕ್ರಿಯೆಟಿವ್ ಟ್ರಸ್ಟ್ ಪ್ರಮುಖ ಲೂಯಿಸ್ ಪಿರೇರಾ, ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ದೇಮಾಣಿ ಶಿರೋಜಿ, ಸಂಜಯ ಕಾನಕತ್ರಿ, ಯಾಕೂಬಸಾಬ್ ನಾಯ್ಕ್, ವೆಂಕಟೇಶ ಸೊಳಂಕಿ ಇದ್ದರು. ಸಭಾ ಕಾರ್ಯಕ್ರಮದ ನಂತರ ಕಲೋತ್ಸವ ನಡೆಯಿತು, ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ನಿಜಲಿಂಗಪ್ಪ ಬಡಿಗೇರ, ಗೋಪಾಲಕೃಷ್ಣ ಎಸ್.ಎನ್. ಹಾಗೂ ಅಕ್ಷತಾ, ತುಳಸಾ ಎಡಗೆ, ಸ್ವಾತಿ ಕಮ್ಮಾರ ಮತ್ತು ಕಾವ್ಯಾ ರಾಚೋಟ್ಕರ ಸಂಗಡಿಗಳು ಕಾರ್ಯಕ್ರಮ ನಿರ್ವಹಿಸಿದರು.