ಸಂತರು, ಶರಣರ ಆಗಮನ ವಸಂತದ ಗಾಳಿ ಇದ್ದಂಗ, ವಸಂತದ ಗಾಳಿಯಲ್ಲಿ ಎಲ್ಲರೂ ಸುಖಿಗಳು. ರಾಜಕಾರಣಿಗಳು ಬಂದು ಹೋದರೆ ಬಿರುಗಾಳಿ ಬಿಸಿದಂಗೆ.
ಮುಳಗುಂದ: ಸಂಸ್ಕಾರ, ಸನ್ನಡತೆ ಇದ್ದಲ್ಲಿ ಗುರುವಿನ ಕೃಪೆ ಪ್ರಾಪ್ತಿಯಾಗುತ್ತದೆ. ಇಂತಹ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಶರಣರ ಹಿತ ನುಡಿ, ಪುರಾಣ, ಪ್ರವಚನಗಳನ್ನು ಆಲಿಸಿ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಪಾವನವಾಗುತ್ತದೆ, ಸಾರ್ಥಕತೆ ಹೊಂದುತ್ತದೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮಿಗಳು ತಿಳಿಸಿದರು.
ಸಮೀಪದ ನೀಲಗುಂದ ಗ್ರಾಮದ ಜ್ಞಾನಗಿರಿ ಗುದ್ನೇಶ್ವರ ಮಠದಲ್ಲಿ ಶನಿವಾರ ಸಂಜೆ ದಿವ್ಯ ಚೇತನ ಟ್ರಸ್ಟ್ ವತಿಯಿಂದ ನಡೆದ ಮಹಾಶಿವರಾತ್ರಿ ಉತ್ಸವದ ಸಂತವಾಣಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂತರು, ಶರಣರ ಆಗಮನ ವಸಂತದ ಗಾಳಿ ಇದ್ದಂಗ, ವಸಂತದ ಗಾಳಿಯಲ್ಲಿ ಎಲ್ಲರೂ ಸುಖಿಗಳು. ರಾಜಕಾರಣಿಗಳು ಬಂದು ಹೋದರೆ ಬಿರುಗಾಳಿ ಬಿಸಿದಂಗೆ. ಒಬ್ಬರು ಬಂದರೆ ಶಾಂತಿ, ಇನ್ನೊಬ್ಬರು ಬಂದರೆ ಕ್ರಾಂತಿ. ಯಾವುದು ಬೇಕು ಅದು ನಿಮ್ಮ ಆಯ್ಕೆ. ಸಂತರವಾಣಿಯಿಂದ ಪ್ರತಿಯೊಬ್ಬರ ಬದುಕಲ್ಲಿ ಬದಲಾವಣೆ ತರಲಿ ಎಂದರು.ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಹಾಶಿವರಾತ್ರಿ ಉತ್ಸವ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಸಂತವಾಣಿ, ಉಪನ್ಯಾಸ, ನಾಡಿನ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಶಿವಸ್ಮರಣೆಯೊಂದಿಗೆ ಜಾಗರಣೆ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬೆಳಗಾವಿ ಬಸವ ಬೆಳವಿ ಚಿರಂತೇಶ್ವರ ವಿರಕ್ತಮಠದ ಶರಣಬಸವ ದೇವರು ಉಪನ್ಯಾಸ ನೀಡಿ, ತ್ರಿಕಾಲ ಸತ್ಯವನ್ನು ಗುದ್ನೇಶ್ವರ ಶ್ರೀಗಳು ಹೇಳುತ್ತಿದ್ದರು. ಅಂತಹ ಜ್ಞಾನ, ಶಕ್ತಿ ಅವರಲ್ಲಿ ಇತ್ತು. ಇಂತಹ ಪುಣ್ಯಾತ್ಮರ ನಾಡಿನಲ್ಲಿ ಜನಿಸಿದವರು ನಾವೇ ಪುಣ್ಯವಂತರು ಎಂದರು.ಹೊಸಹಳ್ಳಿ ಬೂದೀಶ್ವರ ಮಠದ ಬೂದೀಶ್ವರ ಸ್ವಾಮಿಗಳು ಮಾತನಾಡಿ, ಬದುಕಿನ ಸುಖಕ್ಕಾಗಿ ದಿನದ 24 ಗಂಟೆಗಳ ಕಾಲ ಮನುಷ್ಯ ದುಡಿಯುತ್ತಾನೆ. ಬದುಕಿನುದ್ಧಕ್ಕೂ ದುಡಿದು ಸಂಪತ್ತು ಗಳಿಸುತ್ತಾನೆ. ಇಷ್ಟೆಲ್ಲ ಸಂಪತ್ತು ಗಳಿಸಿದರೂ ಬದುಕಿಗೆ ನೆಮ್ಮದಿ, ಶಾಂತಿ ಇಲ್ಲ. ಮನಶಾಂತಿ ಎನ್ನುವುದು ಕಂಡ ಕಂಡಲ್ಲಿ ಸಿಗುವ ವಸ್ತುವಲ್ಲ, ಅದನ್ನು ಗಳಿಸಬೇಕು, ಮನದಲ್ಲಿ ಅರಳಿಸಬೇಕು ಎಂದರು.ಈ ವೇಳೆ ಮುಳಗುಂದ ಗವಿಮಠ, ಧಾರಾವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು. ದಿವ್ಯ ಚೇತನ ಶಾಲಾ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ಜರುಗಿತು.
ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ರಾಮಣ್ಣ ಕಮಾಜಿ, ಡಾ. ಎಸ್.ಸಿ. ಚವಡಿ, ಸಂಜಯ ನೀಲಗುಂದ, ಎನ್.ಎಂ. ಅರಮನಿ ಸೇರಿದಂತೆ ಪ್ರಮುಖರು ಇದ್ದರು.