ಕನ್ನಡಪ್ರಭ ವಾರ್ತೆ ಸುತ್ತೂರು
ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಭಾರತದ ತೋಟಗಾರಿಕಾ ಪಿತಮಹಾರಾದ ಡಾ.ಎಂ.ಎಚ್. ಮರಿಗೌಡ ಅವರ ಜನುಮದಿನದ ಅಂಗವಾಗಿ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ಹಾಗೂ ಜೇನು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು.ಡಾ.ಜಿ.ಎಂ. ವಿನಯ್ ಮಾತನಾಡಿ, ತೋಟಗಾರಿಕೆ ದಿನಾಚರಣೆಯ ಉದ್ದೇಶ, ತೋಟಗಾರಿಕೆ ಕ್ಷೇತ್ರಕ್ಕೆ ಡಾ.ಎಂ.ಎಚ್. ಮರಿಗೌಡ ಅವರ ಕೊಡುಗೆ, ಅವರ ಸಾಧನೆಯನ್ನು ಪರಿಗಣಿಸಿ ಆ. 8 ಅನ್ನು ತೋಟಗಾರಿಕೆ ದಿನಾಚರಣೆ ಎಂದು ಆಚರಿಸಲಾಗುತ್ತಿದೆ ಎಂದು ರೈತರಿಗೆ ಮಾಹಿತಿ ನೀಡಿದರು.
ಮೈಸೂರಿನ ನಿವೃತ್ತ ಕೆಎಎಸ್ ಅಧಿಕಾರಿಯಾದ ಡಾ. ಬೋರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮರಿಗೌಡರು ತೋಟಗಾರಿಕೆಯನ್ನೇ ತಮ್ಮ ಜೀವನವಾಗಿ ಮಾಡಿಕೊಂಡಿದ್ದರು, ಅವರು ಮಾಡಿರುವ ಕೆಲಸದಿಂದ ಇವತ್ತು ತೋಟಗಾರಿಕೆ ಬೆಳೆಗಳಿಂದ ರೈತರು ಹೆಚ್ಚಿನ ಆದಾಯವನ್ನು ಪಡೆಯುವಂತಾಗಿದೆ ಹಾಗೂ ಕರ್ನಾಟಕ ರಾಜ್ಯವು ತೋಟಗಾರಿಕೆ ರಾಜ್ಯ ಎಂದು ಕರೆಯಲ್ಪಟ್ಟಿತ್ತು ಎಂದು ತಿಳಿಸಿದರು,ನಂತರ ರೈತರಿಗೆ ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿ, ಜೇನು ಕೃಷಿ ಮಾಡುವುದರಿಂದ ರೈತರು ತಮ್ಮ ಇಳುವರಿಯನ್ನು ನೈಸರ್ಗಿಕವಾಗಿ ಹೆಚ್ಚು ಮಾಡಬಹುದು ಹಾಗೂ ಸ್ವತಃ ಅವರೇ ಬೆಳೆಯುತ್ತಿರುವ ಮಾವು, ಲಕ್ಷ್ಮಣಪಲ, ಲಿಚ್ಚಿ ಹಾಗೂ ಇನ್ನಿತರ ನೂತನ ಕೃಷಿಯ ಬಗ್ಗೆ ತಮ್ಮ ಅನುಭವವನ್ನು ರೈತರೊಂದಿಗೆ ಅಂಚಿಕೊಂಡು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತೋಟಗಾರಿಕೆ ದಿನಾಚರಣೆಯನ್ನು ಪ್ರತಿವರ್ಷ ನಮ್ಮ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ವಿಷಯಕ್ಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದೆ, ಅದರಲ್ಲಿ ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿ, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಾಗಿ ರಾಸಾಯನಿಕಗಳನ್ನು ಬಳಸುವುದರಿಂದ ನೈಸರ್ಗಿಕವಾಗಿ ಜೇನು ಹುಳುಗಳ ಸಂಖ್ಯೆ ಕಡಿಮೆಯಾಗಿದೆ, ಆದ್ದರಿಂದ ರೈತರು ಜೇನು ಕೃಷಿ ಮಾಡಬೇಕು ಉತ್ತಮ ಇಳುವರಿಯನ್ನು ಪಡೆಯಬೇಕು ಎಂದು ರೈತರಿಗೆ ತಿಳಿಸಿದರು.ನ್ಯಾಷನಲ್ ಫರ್ಟಿಲೈಜರ್ ಲಿಮಿಟೆಡ್‌ನ ಜಿಲ್ಲಾ ವ್ಯವಸ್ಥಾಪಕರಾದ ಕಾಶಪ್ಪ ಅವರು ಅಥಿತಿಗಳಾಗಿ ಭಾಗವಹಿಸಿದ್ದರು.
ಸಸ್ಯ ಸಂರಕ್ಷಣೆ ವಿಷಯ ತಜ್ಞರಾದ ಡಾ.ವೈ.ಪಿ. ಪ್ರಸಾದ್, ಮಾತನಾಡಿ, ಕೃಷಿಯಲ್ಲಿ ಜೇನು ಸಾಕಣೆಯು ಕೂಡ ಒಂದು ಭಾಗ, ಜೇನು ಸಾಕಣೆಯಿಂದ ಬೆಳೆಗಳಲ್ಲಿ ಪರಾಗಸ್ಪರ್ಶ ಹೆಚ್ಚಾಗಿ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ ಹಾಗೂ ಇದನ್ನು ಒಂದು ಉದ್ಯಮವಾಗಿ ಅಥವಾ ಉಪಕಸುಬನ್ನಾಗಿ ಅಳವಡಿಸಿಕೊಂಡರೆ ಹೆಚ್ಚು ಲಾಭ ಪಡೆಯಬಹುದು ಎಂದು ತಿಳಿಸಿದರು. ನಂತರ ಜೇನು ಕೃಷಿ ತರಬೇತಿಯ ಸಂಪನ್ಮೂಲ ವ್ಯಕ್ತಿಯಾದ ಪ್ರಗತಿಪರ ಜೇನು ಕೃಷಿಕಾರದ ರವಿ, ಜೇನಿನ ಇತಿಹಾಸ, ಜೇನು ಕೃಷಿ ಆರಂಭವಾದ ರೀತಿ, ಹೆಜ್ಜೇನು, ಕೊಲು ಜೇನು, ನುಸುರಿಜೇನು, ತುಡುವೆಜೇನು ಹಾಗೂ ಇತರ ಜೇನಿನ ತಳಿಗಳ ಕುರಿತು ಮಾಹಿತಿ, ಜೇನು ನೊಣಗಳ ಕೆಲಸ, ಜೇನು ಕೃಷಿಯ ವೈಜ್ಞಾನಿಕ ಕೃಷಿ ಕುರಿತು ಸಂಕ್ಷಿಪ್ತವಾದ ಮಾಹಿತಿ ನೀಡಿದರು,ಕೃಷಿ ವಿಜ್ಞಾನ ಕೇಂದ್ರದ ಜೇನು ಕೃಷಿ ತಾಕಿನಲ್ಲಿ ಪ್ರಾಯೋಗಿಕವಾಗಿ ಜೇನು ಸಾಕುವ ಹಾಗೂ ಜೇನು ತುಪ್ಪ ತೆಗೆಯುವ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಎಚ್.ವಿ. ದಿವ್ಯಾ, ಶಾಮರಾಜ್, ಡಾ. ದೀಪಕ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು, 70ಕ್ಕೂ ಹೆಚ್ಚು ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.