ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಜೆಟ್ ಉತ್ತರದಾಯಿ ಆಗಲಿ

KannadaprabhaNewsNetwork |  
Published : Feb 15, 2024, 01:36 AM IST
46 | Kannada Prabha

ಸಾರಾಂಶ

ಬಜೆಟ್ ಬಗ್ಗೆ ಇರುವ ನಿರೀಕ್ಷೆ, ಕಾತರ, ಕುತೂಹಲಗಳೆಲ್ಲ ಬಜೆಟ್ ಮಂಡನೆಯಾಗುತ್ತಿದ್ದಂತೆ ಮಾಯವಾಗುತ್ತದೆ. ಆಗೇನಿದ್ದರೂ ನಿರಾಸೆ, ಅಸಮಾಧಾನ, ಆಕ್ರೋಶ ಭುಗಿಲೇಳುತ್ತದೆ.

ಕಾರವಾರ:ಬಜೆಟ್ ಬಗ್ಗೆ ಇರುವ ನಿರೀಕ್ಷೆ, ಕಾತರ, ಕುತೂಹಲಗಳೆಲ್ಲ ಬಜೆಟ್ ಮಂಡನೆಯಾಗುತ್ತಿದ್ದಂತೆ ಮಾಯವಾಗುತ್ತದೆ. ಆಗೇನಿದ್ದರೂ ನಿರಾಸೆ, ಅಸಮಾಧಾನ, ಆಕ್ರೋಶ ಭುಗಿಲೇಳುತ್ತದೆ. ಇದು ಕಳೆದ ಹತ್ತಾರು ವರ್ಷಗಳ ಅನುಭವ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಇದಕ್ಕೆ ಪ್ರಮುಖ ಕಾರಣ ಎಂದರೆ ಪ್ರತಿ ಬಜೆಟ್ ಬರುವಾಗಲೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆ, ಆರ್ಥಿಕ ಚಟುವಟಿಕೆಗೆ ಉತ್ತೇಜನ, ಆರೋಗ್ಯ, ಶಿಕ್ಷಣ ಹಾಗೂ ಸಂಪರ್ಕ ವ್ಯವಸ್ಥೆ ಸುಧಾರಣೆ, ಮೂಲಭೂತ ಸೌಲಭ್ಯ ಹೀಗೆ ಎಲ್ಲ ಅಗತ್ಯತೆಗಳ ಬಗ್ಗೆ ನಿರೀಕ್ಷೆ ಗರಿಗೆದರುತ್ತದೆ. ಆದರೆ ಬಜೆಟ್‌ನಲ್ಲಿ ಎಲ್ಲ ನಿರೀಕ್ಷೆಗಳೂ ಹುಸಿಯಾಗುವ ಜತೆಗೆ ಘೋಷಣೆ ಮಾಡಿದ ಭರವಸೆಗಳೂ ಈಡೇರುವುದೇ ಇಲ್ಲ. ಹಾಗಿದ್ದರೆ ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದೇನು. ಈಡೇರಿದ್ದೇನು ಎನ್ನುವುದನ್ನು ನೋಡಿದರೆ ಎಲ್ಲದಕ್ಕೂ ಇಲ್ಲ ಎನ್ನುವ ಉತ್ತರವೇ ಕೇಳಿಬರುತ್ತಿದೆ. ಅಂಕೋಲಾ ತಾಲೂಕಿನ ಕೇಣಿಯಲ್ಲಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣ ಬಿಜೆಪಿ ಸರ್ಕಾರ ಮಂಡಿಸಿದ ಕೊನೆಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದನ್ನು ಸಿದ್ದರಾಮಯ್ಯ ಅವರೂ ಘೋಷಿಸಿದರು. ಮಾಜಾಳಿ ಮೀನುಗಾರಿಕೆ ಬಂದರು ಯೋಜನೆಯೂ ಬಿಜೆಪಿ ಸರ್ಕಾರ ಘೋಷಿಸಿದ್ದನ್ನು ಕಾಂಗ್ರೆಸ್ ಸರ್ಕಾರವೂ ಘೋಷಿಸಿತು. ಜತೆಗೆ ಹೊನ್ನಾವರ ತಾಲೂಕಿನ ಮಂಕಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣವನ್ನು ಹೊಸದಾಗಿ ಘೋಷಿಸಲಾಯಿತು. ಹೊನ್ನಾವರ ಹಾಗೂ ಜೋಯಿಡಾದಲ್ಲಿ ಅಗ್ನಿಶಾಮಕ ಠಾಣೆ ಘೋಷಿಸಲಾಗಿತ್ತು. ಕರಾವಳಿ ಬೀಚ್ ಟೂರಿಸಂಗೆ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿತ್ತು.ವಿಪರ್ಯಾಸ ಎಂದರೆ ಕೇಣಿ ಗ್ರೀನ್ ಫೀಲ್ಡ್ ಬಂದರು ಯೋಜನೆಯ ಬಗ್ಗೆ ಆರಂಭಿಕ ಸಿದ್ಧತೆಗಳೂ ಆಗಿಲ್ಲ. ಮಾಜಾಳಿ ಬಂದರು ನಿರ್ಮಾಣವೂ ಪೂರ್ವಸಿದ್ಧತೆಯಲ್ಲಿಯೇ ಇದೆ. ಹೊನ್ನಾವರದ ಮಂಕಿಯ ಬಂದರು ನಿರ್ಮಾಣದ ಬಗ್ಗೆ ಯಾವುದೇ ಸಿದ್ಧತೆಗಳು ಆಗಿಲ್ಲ. ಜೋಯಿಡಾದಲ್ಲಿ ಅಗ್ನಿಶಾಮಕ ಠಾಣೆಗೆ ಸ್ಥಳ ಪರಿಶೀಲನೆಯ ಹಂತದಲ್ಲೇ ಇದೆ. ಕರಾವಳಿ ಬೀಚ್ ಟೂರಿಸಂಗೆ ಕಾರ್ಯಪಡೆ ರಚನೆ ನನೆಗುದಿಗೆಯಲ್ಲಿ ಬಿದ್ದಿದೆ.ಜಿಲ್ಲೆಯ ಜನತೆಯ ಅಗತ್ಯತೆ, ಬೇಡಿಕೆ ಬಜೆಟ್‌ನಲ್ಲಿ ಪ್ರಸ್ತಾಪವಾಗುವುದೇ ಇಲ್ಲ. ಘೋಷಣೆಯಾದ ಯೋಜನೆಗಳೂ ಜಾರಿಗೆ ಬರುವುದಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಇದೇ ಸಮಸ್ಯೆಯನ್ನು ಉತ್ತರ ಕನ್ನಡದ ಜನತೆ ಎದುರಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ಜನತೆ ಬಜೆಟ್ ಬಗ್ಗೆ ಭರವಸೆಯನ್ನೇ ಕಳೆದುಕೊಳ್ಳಬೇಕಾದೀತು ಎನ್ನುವುದು ಪರಿಣತರ ಅಂಬೋಣ. ಏನೇ ಇರಲಿ, ಈ ಬಾರಿಯೂ ಬಜೆಟ್ ಬಗ್ಗೆ ಜನತೆ ಆಶಾವಾದಿಗಳಾಗಿದ್ದಾರೆ. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈ ಬಜೆಟ್ ಉತ್ತರದಾಯಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ