ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
2014ರಿಂದ ರೈತರ ಆಧಾಯವನ್ನು ದ್ವಿಗುಣ ಮಾಡುತ್ತೇನೆಂದು ಭಾಷಣ ಮಾಡುವ ಪ್ರಧಾನಿಗಳು ಕೇವಲ ಶ್ರೀಮಂತರ ಆಸ್ತಿಗಳನ್ನು ಹೆಚ್ಚಳ ಮಾಡುವ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆಯೇ ಹೊರತು, ರೈತರನ್ನು ಬದುಕಿಸುವ ಯಾವ ನೀತಿಗಳನ್ನು ಜಾರಿಗೆ ತರುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ಕೃಷಿ ತಜ್ಞರಾದ ಡಾ. ಎಂ.ಎಸ್ ಸ್ವಾಮಿನಾಥನ್ ವರದಿ ಪ್ರಕಾರ ಶೇ. 50ರಷ್ಟು ಲಾಭಾಂಶವನ್ನು ಸೇರಿಸಿ ಬೆಲೆ ನಿಗದಿ ಮಾಡುಬೇಕೆನ್ನುವ ಬೇಡಿಕೆಗಳನ್ನು ರೈತ ಸಮುದಾಯ ನಿರಂತರವಾಗಿ ಸರ್ಕಾರದ ಮುಂದಿಡುತ್ತಿದ್ದರೂ ಈ ಕುರಿತು ಯಾವ ಸ್ಪಷ್ಟ ತೀರ್ಮಾನವನ್ನೂ ಘೋಷಿಸಲು ಮುಂದಾಗುತ್ತಿಲ್ಲ. ಬದಲಿಗೆ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಸ್ವಾಮಿನಾಥನ್ ವರದಿ ಜಾರಿಗೊಳಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದರು.ಇಂತಹ ರೈತ ವಿರೋಧಿ ಸರ್ಕಾರಗಳ ನೀತಿಗಳನ್ನು ಬದಲಾಗಿಸಬೇಕಾಗದರೆ ರೈತ ಸಮುದಾಯ ಜಾಗೃತರಾಗಿ ಹಳ್ಳಿಗಳಲ್ಲಿ ಸಂಘಟಿತರಾದರೆ ಮಾತ್ರ ಕೃಷಿಯನ್ನು ಉಳಿಸಿಕೊಳ್ಳಲು ಸಾದ್ಯ. ಆ ನಿಟ್ಟಿನಲ್ಲಿ ಅಖಿಲ ಭಾರತ ಕಿಸಾನ್ ಸಭಾಗೆ ಸಂಯೋಜನೆಯೊಂದಿರುವ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ರೈತರ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ರೈತರನ್ನು ಜಾಗೃತರನ್ನಾಗಿಸಿ, ಸ್ಥಳೀಯ ಸಮಸ್ಯೆಗಳ ಪರಿಹಾರದ ಜೊತೆಗೆ ಕೇಂದ್ರ ರಾಜ್ಯ ಸರ್ಕಾರಗಳ ನೀತಿಗಳನ್ನು ಹಿಮ್ಮೆಟ್ಟಿಸುವ ಹೋರಾಟಗಳಿಗೆ ಅಣಿಯಾಗುತ್ತಿದೆ ಎಂದರು.ಬಹಿರಂಗ ಸಭೆಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರಾದ ಎಚ್.ಎಸ್. ಮಂಜುನಾಥ್, ಸರ್ಕಾರಗಳು ಉಚಿತ ವಿದ್ಯುತ್ ನೀಡುತ್ತಿರುವಾಗಲೇ ರೈತರು ಸಾಲಮಾಡುವುದು ತಪ್ಪಿಲ್ಲ, ಇನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಪ್ರೀಪೈಡ್ ಡಿಜಿಟಲ್ ಮೀಟರ್ ಅಳವಡಿಸಿದರೆ ಆ ವಿದ್ಯುತ್ ಶಾಕ್‌ನಿಂದಾಗಿಯೇ ರೈತರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಭೂಮಿ ಮಾರಿ ವಿದ್ಯುತ್ ಬಿಲ್ ಕಟ್ಟುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಈ ವಿದ್ಯುತ್ ಮಸೂದೆಯನ್ನು ತಮಿಳುನಾಡು, ಕೇರಳ ಸರ್ಕಾರಗಳು ತಾವು ಜಾರಿ ಮಾಡುವುದಿಲ್ಲವೆಂದು ವಿಧಾನಸಭಾ ಅಧಿವೇಶನಗಳಲ್ಲಿ ನಿರ್ಣಯಗಳನ್ನು ಕೈಗೊಂಡಿವೆ ಆದರೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಮೌನವಾಗಿದೆ ಎಂದರು. ರೈತರ ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚಂದ್ರಹಾಸ್‌ರವರು ತಹಸೀಲ್ದಾರ್ ಕಚೇರಿ ಎಂದರೆ ಅದು ರೈತರ ಪಾಲಿಗೆ ನರಕ ಸದೃಶ್ಯವಾಗಿದೆ. ತಾಲೂಕಿನ ಬಹುತೇಕ ರೈತರು ತಮ್ಮ ಭೂಮಿಯ ವಿಚಾರವಾಗಿ ಕಂದಾಯ ಇಲಾಖೆಯಿಂದ ಅತ್ಯಂತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಭ್ರಷ್ಟಾಚಾರವೆನ್ನುವುದು ಮುಗಿಲು ಮುಟ್ಟಿ ಕಾನೂನುಬದ್ಧವಾಗುತ್ತಿದೆ. ಇಂತಹ ಸ್ಥಿತಿಯನ್ನು ರೈತರು ಸಂಘಟಿತರಾಗುವ ಮೂಲಕ ಮಾತ್ರ ಬದಲಾಯಿಸಲು ಸಾಧ್ಯ ಎಂದರು. ಹಿರಿಯ ರೈತ ಮುಖಂಡರಾದ ಬರಗೂರು ಶಂಕರಣ್ಣ, ಮಹಿಳಾ ಮುಖಂಡರಾದ ಸುಜಾತಾ ಕುಮಾರಸ್ವಾಮಿ ಇದ್ದರು. ನಿರ್ವಹಣೆಯನ್ನು ಕೆಪಿಆರ್‌ಎಸ್ ತಾಲ್ಲೂಕು ಕಾರ್ಯದರ್ಶಿ ವಾಸುದೇವ ಕಲ್ಕೆರೆ, ತೇಜಸ್‌ಗೌಡ, ಶ್ರೀನಿವಾಸ್ ಭಾಗವಹಿಸಿದ್ದರು. ಬಹಿರಂಗ ಸಭೆಯ ನಂತರ ನಡೆದ ಪ್ರತಿನಿಧಿಗಳ ಅಧಿವೇಶನದಲ್ಲಿ ತಾಲೂಕಿನ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಂಡು ಸಂಘಟನೆಯನ್ನು ಬಲಗೊಳಿಸಲು 19 ಜನರ ನೂತನ ತಾಲೂಕು ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.