ಯಾವ ಪುರುಷಾರ್ಥಕ್ಕೆ ಸರ್ಕಾರದಿಂದ ಸಾಧನಾ ಸಮಾವೇಶ?: ವಿರೂಪಾಕ್ಷಪ್ಪ ಬಳ್ಳಾರಿ

KannadaprabhaNewsNetwork |  
Published : Feb 12, 2026, 02:30 AM IST
ಹಾವೇರಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ 44 ಸಾವಿರ ಮನೆ ಕೊಟ್ಟಿದ್ದೇವೆ ಎಂದು ದೊಡ್ಡ ಸಮಾವೇಶ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಒಬ್ಬ ಬಡವರಿಗೂ ಒಂದು ಮನೆಯನ್ನು ಕೊಟ್ಟಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಹಗರಣಗಳ ಸರಮಾಲೆಯೇ ಸುತ್ತಿಕೊಂಡಿದೆ. ಆದರೂ ಕಾಂಗ್ರೆಸ್‌ ಸರ್ಕಾರ ಫೆ. 14ರಂದು ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಪ್ರಶ್ನಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆನಂತರ ರಾಜ್ಯದಲ್ಲಿ ನೀಡುತ್ತಿದ್ದ ₹4 ಸಾವಿರ ಕಿಸಾನ್ ಸಮ್ಮಾನ ಯೋಜನೆ ಬಂದ್ ಮಾಡಿದೆ. ಬೆಳೆವಿಮೆ, ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕಾಗಿ ರೈತರು ಅಲೆದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಆಗಿದೆ. 5 ಗ್ಯಾರಂಟಿ ನೆಪದಲ್ಲಿ ಅಧಿಕಾರಕ್ಕೆ ಬಂದು ಯಾವ ವಿದ್ಯಾರ್ಥಿಗೂ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಸರ್ಕಾರದ ರೈತ ವಿದ್ಯಾನಿಧಿ ಯೋಜನೆ ಕಿತ್ತುಕೊಂಡಿದ್ದಾರೆ. ಜತೆಗೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜನರಿಗೆ ಕೊಡುತ್ತಿಲ್ಲ. ಆಸ್ತಿ ನೋಂದಣಿ ಶುಲ್ಕ, ಮದ್ಯದ ದರ ಹೆಚ್ಚಳ, ಹಾಲಿನ ದರ, ಪಹಣಿ ಪತ್ರ ದರ, ದಿನಸಿ ಸಾಮಗ್ರಿ ಬೆಲೆ ಹೆಚ್ಚಳ ಆಗಿದೆ. ಇಂತಹ ಅನೇಕ ವೈಫಲ್ಯಗಳನ್ನು ಇಟ್ಟುಕೊಂಡು ಜನವಿರೋಧಿ ರಾಜ್ಯ ಸರ್ಕಾರ ಸಮಾವೇಶ ಮಾಡಲು ಹೊರಟಿರುವುದು ಅರ್ಥಹೀನ. ಇದು ಸರ್ಕಾರದ ಸಾಧನಾ ಸಮಾವೇಶವಲ್ಲ, ಶೂನ್ಯ ಸಮಾವೇಶ ಎಂದು ಲೇವಡಿ ಮಾಡಿದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ 44 ಸಾವಿರ ಮನೆ ಕೊಟ್ಟಿದ್ದೇವೆ ಎಂದು ದೊಡ್ಡ ಸಮಾವೇಶ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಒಬ್ಬ ಬಡವರಿಗೂ ಒಂದು ಮನೆಯನ್ನು ಕೊಟ್ಟಿಲ್ಲ. ನಮ್ಮ ಅವಧಿಯಲ್ಲಿ ಮಂಜೂರಾಗಿದ್ದ ಮನೆಗಳ ನೋಂದಾವಣಿ ನೆಪದಲ್ಲಿ ಬಡವರ ಜೇಬಿನಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ 28 ಸಾವಿರ ಹಕ್ಕುಪತ್ರ ವಿತರಣೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದಕ್ಕಾಗಿ ಕೋಟ್ಯಂತರ ರು. ಸಂಗ್ರಹಣೆ ಮಾಡುತ್ತಿದ್ದಾರೆ. ಅಧಿಕಾರಿಗಳ ತಂಡ ಸಾರ್ವಜನಿಕರ ಹಣ ಲೂಟಿ ಮಾಡುತ್ತಿರುವುದು ದುರಂತದ ಸಂಗತಿ ಎಂದರು.

ಪರಿಸ್ಥಿತಿ ಎಲ್ಲಿಗೆ ಬಂದಿದೆ?: ರಾಜ್ಯ ಸರ್ಕಾರ ಅಸಮರ್ಪಕ ಆಡಳಿತ ನಡೆಸಿದೆ. ಎಸ್‌ಸಿ-ಎಸ್‌ಟಿಗೆ ಮೀಸಲಿದ್ದ ₹38,879 ಕೋಟಿ ಹಣ ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ. ಅಬಕಾರಿ ಲೈಸೆನ್ಸ್ ಕೊಡಲು ₹6000 ಕೋಟಿ ಲೂಟಿ ಹೊಡೆದಿದ್ದಾರೆ. ಜಿಲ್ಲೆಯಲ್ಲಿ ಇಸ್ಪೀಟು, ಒಸಿ, ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ರಾಜ್ಯದಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದ್ದರೂ ಗೃಹ ಇಲಾಖೆ ಕಣ್ಮುಚ್ಚಿಕೊಂಡು ಕೂತಿದೆ. ಪೊಲೀಸರು ಕಳ್ಳರ ಮುಖ್ಯಸ್ಥರಾಗಿ ದರೋಡೆ ನಡೆಸುವ ಕೆಲಸ ಮಾಡುತ್ತಿದ್ದಾರೆ ಎಂದರೆ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಸಂತೋಷ ಆಲದಕಟ್ಟಿ, ಕಿರಣ ಕೊಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ನಿರಂಜನ್ ಹೇರೂರ, ಕಿರಣಕುಮಾರ ಕೋಣನವರ ಇದ್ದರು. ಪೊಲೀಸ್ ಅಧಿಕಾರಿ ಅಮಾನತುಗೊಳಿಸಿ: ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಒಂದು ಸಮುದಾಯದ ಪದಾಧಿಕಾರಿಗಳನ್ನು ಕರೆದುಕೊಂಡು ಬಂದು ಸನ್ಮಾನ ಮಾಡುತ್ತಾರೆ ಎಂದರೆ ಪೊಲೀಸ್ ಇಲಾಖೆ ಎಷ್ಟರಮಟ್ಟಿಗೆ ಹಾಳಾಗಿದೆ ಎಂಬುದು ಊಹಿಸಲಿಕ್ಕೂ ಅಸಾಧ್ಯವಾಗಿದೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಪದಾಧಿಕಾರಿಗಳನ್ನು ಕರೆಸಿ ಸನ್ಮಾನ ಮಾಡಿದ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿ ಜಿಲ್ಲಾ ಎಸ್‌ಪಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಕ್ರಮವಾಗಿಲ್ಲ. ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?