ಇದುವರೆಗೂ ಪರಿಶಿಷ್ಠ ಜನಾಂಗದ ಯಾವ ವ್ಯಕ್ತಿಯೂ ಸಿಎಂ ಆಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ವಿಚಾರ ಇದ್ದರೆ ದಲಿತ ನಾಯಕ ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ದಲಿತ ಮುಖಂಡ ಚಂದ್ರಶೇಖರ ಕೊಡಬಾಗಿ ಒತ್ತಾಯಿಸಿದರು.
ವಿಜಯಪುರ : ಇದುವರೆಗೂ ಪರಿಶಿಷ್ಠ ಜನಾಂಗದ ಯಾವ ವ್ಯಕ್ತಿಯೂ ಸಿಎಂ ಆಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ವಿಚಾರ ಇದ್ದರೆ ದಲಿತ ನಾಯಕ ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ದಲಿತ ಮುಖಂಡ ಚಂದ್ರಶೇಖರ ಕೊಡಬಾಗಿ ಒತ್ತಾಯಿಸಿದರು.
ಜಿಲ್ಲಾ ಛಲವಾದಿ ಮಹಾಸಭಾ ಹಾಗೂ ಬುದ್ಧವಿಹಾರ ನಿರ್ಮಾಣ ಸಮಿತಿ ನಗರದ ಬುದ್ಧವಿಹಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಬಾರಿ ಕಾಂಗ್ರೆಸ್ 135 ಸೀಟುಗಳನ್ನು ಪಡೆದಿದ್ದರೂ ಪರಿಶಿಷ್ಠ ಸಮುದಾಯದ ನಾಯಕರಿಗೆ ಅವಕಾಶ ಸಿಕ್ಕಿಲ್ಲ. ಶೇ.90ರಷ್ಟು ಎಸ್ಸಿವರ್ಗದ ಜನರು ಆರಂಭದಿಂದಲೂ ಕಾಂಗ್ರೆಸ್ ಜೊತೆಗಿದ್ದಾರೆ. ಆದರೆ, ನಮ್ಮನ್ನು ವೋಟ್‌ಗಾಗಿ ಉಪಯೋಗ ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ನಾವು ಇನ್ನುಮುಂದೆ ಅವಕಾಶ ಸಿಗದಿದ್ದರೆ ಯಾವುದೇ ರಾಜಕೀಯ ಪಕ್ಷ ಬೆಂಬಲಿಸುವ ಮೊದಲು ಯೋಚನೆ ಮಾಡಬೇಕಾಗುತ್ತದೆ. ಎಸ್ಸಿ ಜನಾಂಗದ ಸರ್ವತೋಮುಖ ಅಭಿವೃದ್ಧಿ ಆಗಬೇಕು ಎಂದರೆ ಸಮಾಜದ ಪ್ರತಿನಿಧಿಯನ್ನು ರಾಜ್ಯ ಚುಕ್ಕಾಣಿ ಹಿಡಿಯುವಂತೆ ಮಾಡಬೇಕು. ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾಗಾಂಧಿ, ರಾಹುಲಗಾಂಧಿ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಜಿ.ಪರಮೇಶ್ವರ ಎರಡು ಬಾರಿ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2009ರಲ್ಲಿ ಖರ್ಗೆ ಅವರಿಗೆ ಅವಕಾಶ ಸಿಗಲಿಲ. 2018ರಲ್ಲೂ ಪರಮೇಶ್ವರಗೆ ಅವಕಾಶ ನೀಡಲಿಲ್ಲ. 2023ರಲ್ಲಿ ಗೃಹ ಖಾತೆ ನೀಡಿ ಸಮಾಧಾನ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಎಐಸಿಸಿ ನಾಯಕರು ಈ ಬಾರಿ ಸಿಎಂ ಬದಲಾವಣೆ ಮಾಡುವುದಾದರೆ ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಬೇಕು ಎಂದು ಆಗ್ರಹಿಸಿದರು.
ಬುದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿ, ಸಿಎಂ ಬದಲಾವಣೆ ವಿಚಾರವೇನಾದರೂ ಇದ್ದರೆ ಈ ಬಾರಿ ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಬೇಕು. ಸಮರ್ಥರಿರುವ ಅವರನ್ನು ಸಿಎಂ ಮಾಡಲೇಬೇಕು ಎಂದು ಒತ್ತಾಯಿಸಿದರು.
ಛಲವಾದಿ ಮಹಾಸಭಾದ ಅಧ್ಯಕ್ಷ ಸುನೀಲ ಉಕ್ಕಲಿ ಮಾತನಾಡಿ, ಕಾಂಗ್ರೆಸ್ ಎಲ್ಲಾ ಸಮುದಾಯದವರನ್ನು ಸಿಎಂ ಮಾಡಿದೆ. ಆದರೆ ಚಲವಾದಿ ಸಮುದಾಯದ ಯಾರನ್ನೂ ಸಿಎಂ ಮಾಡಿಲ್ಲ. ಈಗ ಸಿಎಂ ಬದಲಾವಣೆ ಮಾಡಿದರೆ ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವೈ.ಹೆಚ್.ವಿಜಯಕರ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ಲ ಸೇರಿದಂತೆ ಹಲವರಿದ್ದರು.