ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಐತಿಹಾಸಿಕ ಕೋಟೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೋಟೆ ಒಳಗಡೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕೋಟೆ ವಾಯುವಿಹಾರಿಗಳ ಸಂಘದ ಸದಸ್ಯರು ಸೇರಿದಂತೆ ನಗರದ ನಾಗರೀಕರು ಗುರುವಾರ ಸಂಸದ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.ಮನವಿ ಪತ್ರ ಸಲ್ಲಿಸಿದ ನಂತರ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ, ಕೋಟೆ ಪ್ರವೇಶ ದ್ವಾರಕ್ಕೆ ಬರುವಷ್ಟರಲ್ಲಿ ಸುಸ್ತಾಗುವ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತವೆ ಎಂದರು. ಕೋಟೆ ವೀಕ್ಷಿಸಲು ಕನಿಷ್ಠ ಎರಡು ಗಂಟೆಯಾದರೂ ಬೇಕು. ಬೆಟ್ಟ ಹತ್ತಿ ಎಲ್ಲೆಡೆ ಸುತ್ತಾಡುವ ಪ್ರವಾಸಿಗರಿಗೆ ಜಲಬಾಧೆ ಕಾಡಿದರೆ ಸಮರ್ಪಕ ಶೌಚಾಲಯಗಳಿಲ್ಲ. ಕೋಟೆಯ ಕೆಳಭಾಗ ಹಾಗೂ ಮೇಲುದುರ್ಗದಲ್ಲಿ ಎರಡು ಶೌಚಾಲಯಗಳಿದ್ದು ಎರಡೂ ಸರಿಯಾಗಿ ನಿರ್ವಹಣೆ ಇಲ್ಲದೆ ದುರಸ್ತಿಯಲ್ಲಿವೆ. ಹೀಗಾಗಿ ಶಾಲಾ ವಿದ್ಯಾರ್ಥಿಗಳು, ಪುರುಷರು ಕೋಟೆಯ ಬಯಲು ಪ್ರದೇಶದಲ್ಲಿಯೇ ಮಲ–ಮೂತ್ರ ವಿಸರ್ಜನೆ ಮಾಡುವುದು ಅನಿವಾರ್ಯವಾಗಿದೆ. ಇನ್ನೂ ಮಹಿಳಾ ಪ್ರವಾಸಿಗರ ಪರಿಸ್ಥಿತಿ ಹೇಳತೀರದಾಗಿದೆ. ಈಗ ವರ್ಷಾಂತ್ಯವಾಗಿರುವುದರಿಂದ ಶಾಲಾ ಮಕ್ಕಳು ಸೇರಿ ದಿನಕ್ಕೆ ಸಾವಿರಾರು ಪ್ರವಾಸಿಗರು ಕೋಟೆ ವೀಕ್ಷಣೆಗೆ ಬರುತ್ತಾರೆ. ಇನ್ನೇನು ಬೇಸಿಗೆಕಾಲ ಆರಂಭವಾಗುವುದರಲ್ಲಿದೆ. ಅಷ್ಟರೊಳಗೆ ಪ್ರವಾಸಿಗರು ಮತ್ತು ಕೋಟೆ ಕಾವಲು ಕಾಯುವ ಕಾವಲು ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಈಗಾಗಲೇ ಹಿಂದೆ ಇದ್ದ ರೀತಿ ಹಿರಿಯ ನಾಗರೀಕರಿಗೆ ಕೋಟೆಯೊಳಗೆ ಬೆಳಗ್ಗೆ 6 ರಿಂದ 8 ಗಂಟೆವರೆಗೆ ಮತ್ತು ಸಂಜೆ ಉಚಿತ ಪ್ರವೇಶಕ್ಕೆ ಅವಕಾಶವನ್ನು ಮುಂದುವರಿಸಬೇಕು.
ವಾಯುವಿಹಾರದ ಹಿರಿಯ ನಾಗರೀಕರು ಮತ್ತು ಚಿತ್ರದುರ್ಗ ನಗರದ ನಾಗರೀಕರಿಗೆ ಕೋಟೆಯ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಬೇಕು. ಕೋಟೆಯೊಳಗಿರುವ ಬನಶಂಕರಿ ದೇವಸ್ಥಾನ, ಏಕನಾಥೇಶ್ವರಿ ದೇವಸ್ಥಾನ, ಸಂಪಿಗೆ ಸಿದ್ದೇಶ್ವರ ದೇವಸ್ಥಾನ, ಗಣಪತಿ ದೇವಸ್ಥಾನದ ಪೂಜಾ ಕಾರ್ಯಕ್ರಮಗಳಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಕೋಟೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬೇಕು. ಕೋಟೆಯ ಪ್ರವಾಸಿಗರಿಗೆ ಸಾಕಷ್ಟು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಬೇಕು.ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವ ಹಿರಿಯ ನಾಗರೀಕರಿಗೆ ಕೋಟೆಯ ಪ್ರವೇಶ ನಿರಾಕರಿಸಿ ಪ್ರವೇಶ ಶುಲ್ಕ ನಿಗದಿಪಡಿಸಿರುವ ಪ್ರಯುಕ್ತ ವಾಯುವಿಹಾರಿಗಳು ಕೋಟೆಯ ಮುಂಬಾಗದಲ್ಲಿರುವ ಸಿಮೆಂಟ್ ರಸ್ತೆಯಲ್ಲಿ ವಾಕಿಂಗ್ ಮಾಡಬೇಕಾಗಿದ್ದು ಕೆಲವರಿಗೆ ಅಪಘಾತಗಳು ಉಂಟಾಗಿ ತೊಂದರೆ ಆಗಿರುವ ಪ್ರಯುಕ್ತ ತಕ್ಷಣ ಪ್ರವೇಶ ಶುಲ್ಕದಿಂದ ವಿನಾಯತಿ ನೀಡಬೇಕು ಎಂದು ಕೋರಿದ್ದಾರೆ.
ಮನವಿ ಪತ್ರ ಸ್ವೀಕರಿಸಿದ ಸಂಸದ ಗೋವಿಂದ ಕಾರಜೋಳರು, ತಕ್ಷಣವೇ ವಾಯು ವಿಹಾರಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಚಿತ್ರದುರ್ಗ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಕೋಟೆ ವಾಯುವಿಹಾರಿಗಳ ಸಂಘದ ಸದಸ್ಯರು ಹಾಗೂ ಹಿರಿಯ ನಾಗರೀಕರಾದ ಶಾಂತಪ್ಪ, ಮಲ್ಲಿಕಾರ್ಜುನಪ್ಪ, ಕೂಬನಾಯಕ್, ನಿವೃತ್ತ ಶಿಕ್ಷಣಾಧಿಕಾರಿ ನಾಗರಾಜ್, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಕೋಟೆ ಶಾಖೆಯ ಯೋಗ ಶಿಕ್ಷಕ ರವಿ ಕೆ.ಅಂಬೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.