ಪಶ್ಚಿಮಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ವಾಸವಾಗಿರುವ ಅರಣ್ಯ ಬುಡಕಟ್ಟು - ಪರಿಶಿಷ್ಟ ಪಂಗಡದ ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಜಿಲ್ಲಾ ಮಲೆಕುಡಿಯ ಸಂಘವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಪಶ್ಚಿಮಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ವಾಸವಾಗಿರುವ ಅರಣ್ಯ ಬುಡಕಟ್ಟು - ಪರಿಶಿಷ್ಟ ಪಂಗಡದ ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಜಿಲ್ಲಾ ಮಲೆಕುಡಿಯ ಸಂಘವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ ಈದು, ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.ಕೃಷಿ ಭೂಮಿ ರಹಿತರಿಗೆ 400 ಎಕರೆ ಜಾಗ ಮೀಸಲಿಡಬೇಕು. ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯದಿಂದ ಸ್ವ ಇಚ್ಛೆಯಿಂದ ಹೊರಬರುವ ಕುಟುಂಬಗಳಿಗೆ ಗುಣಮಟ್ಟದ ಬದುಕು ಕಟ್ಟಿಕೊಳ್ಳಲು ವಸತಿಸಹಿತ ಕೃಷಿ ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಪರಿಶಿಷ್ಟ ಪಂಗಡ ಒಳ ಮೀಸಲಾತಿ ಜಾರಿಗೊಳಿಸಬೇಕು. ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಅರಣ್ಯ ಇಲಾಖೆಯಲ್ಲಿರುವ ಸ್ಥಳೀಯ ಅರಣ್ಯ ಬುಡಕಟ್ಟು ಮೀಸಲಾತಿಯನ್ನು ಎಲ್ಲಾ ಇಲಾಖೆಗಳಿಗೆ ವಿಸ್ತರಣೆ ಮಾಡಬೇಕು ಎಂದು ಹೇಳಿದರು.ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ಕುಟುಂಬಗಳಿಗೆ ರಸ್ತೆ, ವಿದ್ಯುತ್, ವಸತಿ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಸಮುದಾಯದಲ್ಲಿ ವೃತ್ತಿ ಶಿಕ್ಷಣ ಪಡೆದವರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ನೌಕರಿ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಅರಣ್ಯ ಹಕ್ಕುಪತ್ರ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಬೇಕು ಎಂದು ಆಗ್ರಹಿಸಿದರು.ಕುದುರೆಮುಖ ಅರಣ್ಯದ ಭಾಗವಾಗ ಉಡುಪಿ, ಚಿಕ್ಕಮಗಳೂರು, ದ.ಕ. ಜಿಲ್ಲೆಯಲ್ಲಿ 300ರಿಂದ 400, ಸೋಮೇಶ್ವರ ಅರಣ್ಯ ವ್ಯಾಪ್ತಿಯಲ್ಲಿ 50 ರಿಂದ 60 ಹಾಗೂ ಪುಷ್ಪಗಿರಿ ತಪ್ಪಲಲ್ಲಿ 600ರಿಂದ 700 ಮಲೆಕುಡಿಯ ಕುಟುಂಬಗಳು ವಾಸವಿದ್ದು, ಅವರಿಗೆ ಸರ್ಕಾರ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಲೆಕುಡಿಯ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ್ ಗೌಡ, ಪೂರ್ವಾಧ್ಯಕ್ಷ ಸುಧಾಕರ್ ಗೌಡ ನಾಡ್ಪಾಲು, ಉಪಾಧ್ಯಕ್ಷ ಶೋಭಾ, ಪ್ರ.ಕಾರ್ಯದರ್ಶಿ ಶೋಭಾ, ವಕ್ತಾರ ದಿನೇಶ್ ಗೌಡ ಉಪಸ್ಥಿತರಿದ್ದರು.
-------------
ಸರ್ಕಾರದ ನಿರ್ಲಕ್ಷ್ಯದಿಂದ ದಾರಿತಪ್ಪಿದ ಕಾಡಿನ ಮಕ್ಕಳು
ಕೆಲವು ವರ್ಷಗಳ ಹಿಂದೆ ಕರ್ನಾಟಕ ವಿಮೋಚನಾ ರಂಗದ ಹೆಸರಲ್ಲಿ ಪಶ್ಚಿಮಘಟ್ಟದ ತಪ್ಪಲಲ್ಲಿ ಬದುಕುತ್ತಿದ್ದ ಮುಗ್ಧರನ್ನು ದಾರಿತಪ್ಪಿಸಲಾಯಿತು. ಅದರಿಂದಾಗಿ ಅನೇಕರು ನಕ್ಸಲ್ ಚಳುವಳಿಯಲ್ಲಿ ಭಾಗಿಯಾದರು. ಸರ್ಕಾರ ಅಂದೇ ಎಚ್ಚೆತ್ತುಕೊಂಡು ಮಲೆಕುಡಿಯರಿಗೆ ಸೂಕ್ತ ಸೌಲಭ್ಯಗಳನ್ನು ನೀಡಿದ್ದರೆ, ನಕ್ಸಲ್ ಚಳುವಳಿಯಲ್ಲಿ ಯಾರು ಭಾಗವಹಿಸುತ್ತಿರಲಿಲ್ಲ. ಇಂದಿಗೂ ಸರ್ಕಾರ ಮಲೆಕುಡಿಯರನ್ನು ನಿರ್ಲಕ್ಷ್ಯಿಸುತ್ತಿದೆ ಎಂದು ಶ್ರೀಧರ ಗೌಡ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.