ವಡಗೇರಾದಲ್ಲಿ ಜೆಸ್ಕಾಂ ಉಪ ವಿಭಾಗ ಆರಂಭಿಸಲು ಒತ್ತಾಯ

KannadaprabhaNewsNetwork |  
Published : Jun 20, 2024, 01:00 AM IST
ವಡಗೇರಾಕ್ಕೆ ಜೆಸ್ಕಾಂ ಉಪ-ವಿಭಾಗ ಆರಂಭಿಸಬೇಕೆಂದು ಆಗ್ರಹಿಸಿ ರೈತರ ನಿಯೋಗ ಮಂಗಳವಾರ ಜೆಸ್ಕಾಂ ಎಂ.ಡಿ. ರವೀಂದ್ರ ಕರಿನಿಂಗಣ್ಣನವರ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು. | Kannada Prabha

ಸಾರಾಂಶ

ವಡಗೇರಾಕ್ಕೆ ಜೆಸ್ಕಾಂ ಉಪ-ವಿಭಾಗ ಆರಂಭಿಸಬೇಕೆಂದು ಆಗ್ರಹಿಸಿ ರೈತರ ನಿಯೋಗ ಮಂಗಳವಾರ ಕಲಬುರಗಿಯಲ್ಲಿ ಜೆಸ್ಕಾಂ ಎಂ.ಡಿ. ರವೀಂದ್ರ ಕರಿನಿಂಗಣ್ಣನವರ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಡಗೇರಾ ಪಟ್ಟಣದಲ್ಲಿ ರೈತರ ಹಿತದೃಷ್ಟಿಯಿಂದ ಜೆಸ್ಕಾಂ ಉಪ ವಿಭಾಗ ಆರಂಭಿಸಬೇಕು ಎಂದು ವಡಗೇರಾ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಪಾಟೀಲ್ ಚೆನ್ನೂರ ನೇತೃತ್ವದಲ್ಲಿ ರೈತರ ನಿಯೋಗ ಮಂಗಳವಾರ ಕಲಬುರಗಿಯಲ್ಲಿ ಜೆಸ್ಕಾಂ ಎಂ.ಡಿ. ರವೀಂದ್ರ ಕರಿನಿಂಗಣ್ಣನವರ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ವಡಗೇರಾ ನೂತನ ತಾಲೂಕು ಕೇಂದ್ರವಾಗಿ 6 ವರ್ಷ ಕಳೆದಿದೆ. ಅಲ್ಲದೇ ಈ ಭಾಗದಲ್ಲಿ ಪ್ರಮುಖವಾಗಿ ಭೀಮಾ ಮತ್ತು ಕೃಷ್ಣಾ ನದಿಗಳು ಹರಿಯುತ್ತಿವೆ, ವ್ಯಾಪ್ತಿಯ ರೈತರು ವಿವಿಧ ಬ್ಯಾಂಕ್‌ಗಳಿಂದ ಲಕ್ಷಾಂತರ ರುಪಾಯಿಗಳ ಸಾಲ ಪಡೆದು ತಮ್ಮ ಜಮೀನುಗಳಿಗೆ ನೀರಾವರಿ ಸೌಕರ್ಯ ಮಾಡಿಕೊಂಡಿದ್ದಾರೆ. ಆದರೆ, ವಡಗೇರಾದಲ್ಲಿ ಸೂಕ್ತ ಕಚೇರಿ ಹಾಗೂ ಸಿಬ್ಬಂದಿ ಕೊರತೆಯಿಂದ ರೈತರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.

ವಡಗೇರಾ ತಾಲೂಕನ್ನು ಜೆಸ್ಕಾಂ ಶೋರಾಪೂರ ವಿಭಾಗಕ್ಕೆ ಸೇರಿಸಿದೆ. ಹಲವಾರು ಸಮಯದಲ್ಲಿ ರೈತರ ಜಮೀನಿನಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟರೆ ಹಾಗೂ ವಿದ್ಯುತ್ ಸಾಮಗ್ರಿ ಅವಶ್ಯಕತೆ ಇದ್ದರೆ ಅಲ್ಲಿಗೆ ಹೋಗಿ ತರಲು ವಿಳಂಬವಾಗುತ್ತಿದೆ. ಕಾರಣ ರೈತರ ಬೆಳೆಗಳು ನಾಶವಾಗುತ್ತಿವೆ ಎಂದು ಅವರು ತಿಳಿಸಿದರು.

ಇನ್ನೊಂದು, ಕಡೆ ಪ್ರತಿ ವರ್ಷ ನದಿಗಳ ಪ್ರವಾಹದಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಅನೇಕ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ. ಕಾರಣ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಡಗೇರಾ ಪಟ್ಟಣಕ್ಕೆ ಜೆಸ್ಕಾಂ ಉಪ-ವಿಭಾಗ ಕಚೇರಿ ಆರಂಭಿಸಿ, ಅಗತ್ಯ ಎಂಜಿನಿಯರ್‌ ಹಾಗೂ ಸಿಬ್ಬಂದಿ ನೇಮಕ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈಗಾಗಲೇ ಇಂಧನ ಇಲಾಖೆಯಿಂದ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬರುವಂಥ ಕಮಲಾಪೂರದಲ್ಲಿ ಉಪ ವಿಭಾಗ ಆರಂಭಿಸಲಾಗಿದೆ. ಆದಷ್ಟು ಬೇಗನೆ ಇಲ್ಲಿ ಕೂಡ ಕಚೇರಿ ತೆರೆಯಬೇಕೆಂದು ಮನವಿ ಮಾಡಿದರು. ನಂತರ ನಿಯೋಗ ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.

ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ರೈತ ಮುಖಂಡರಾದ ವೈ. ಪ್ರಸಾದ್, ಮಲ್ಲಿಕಾರ್ಜುನಗೌಡ ಬಿಳ್ಹಾರ, ಅಮೀನರೆಡ್ಡಿ ಕೊಂಕಲ್, ಹನುಮಾನ ಸೇಠ್, ಲಾಯಕ್ ಹುಸೇನ್ ಬಾದಲ್, ಸೋಮನಾಥರಡ್ಡಿ ತುಮಕೂರ, ನಜೀರ್‌ಸಾಬ್, ಶಿವಶರಣಪ್ಪಗೌಡ ತುಮಕೂರ, ಸುರೇಶರೆಡ್ಡಿ ಗೋನಾಲ, ಶರಣು ಅಂಗಡಿ ಗೊಂದೆನೂರ ಸೇರಿದಂತೆ ಇತರರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ