ಕೊಡಗು ಜಿಲ್ಲೆಯಲ್ಲಿ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘ ಆರಂಭ

KannadaprabhaNewsNetwork | Published : Jun 14, 2024 1:00 AM

ಸಾರಾಂಶ

ವಿದೇಶಿ ಹಣ್ಣುಗಳು ಹಾಗೂ ಅಧಿಕ ಮೌಲ್ಯದ ಹಣ್ಣುಗಳನ್ನು ಬೆಳೆಯಲು ಉತ್ತೇಜನ ನೀಡುವುದು ಹಾಗೂ ಕೃಷಿ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕೊಡಗಿನಲ್ಲಿ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘ ರಚಿಸಲಾಗಿದೆ. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿಂದಲೇ ಸಂಘವನ್ನು ಆರಂಭಿಸಲಾಗಿದ್ದು, ಶನಿವಾರ ನಡೆಯಲಿರುವ ಬೆಣ್ಣೆಹಣ್ಣು ಕ್ಷೇತ್ರತೋತ್ಸವ ಕಾರ್ಯಕ್ರಮದಲ್ಲಿ ಈ ಸಂಘವನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತಿದೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಇತ್ತೀಚೆಗೆ ಕೊಡಗಿನಲ್ಲೂ ವಿದೇಶಿ ಹಣ್ಣುಗಳು ಹೆಚ್ದು ಸದ್ದು ಮಾಡುತ್ತಿದ್ದು, ರಾಜ್ಯ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದೇಶಿ ಹಣ್ಣುಗಳನ್ನು ಬೆಳೆಯಲು ರೈತರು ಆಸಕ್ತಿ ತೋರುತ್ತಿದ್ದಾರೆ. ಅದರಂತೆ ವಿದೇಶಿ ಹಣ್ಣುಗಳು ಹಾಗೂ ಅಧಿಕ ಮೌಲ್ಯದ ಹಣ್ಣುಗಳನ್ನು ಬೆಳೆಯಲು ಉತ್ತೇಜನ ನೀಡುವುದು ಹಾಗೂ ಕೃಷಿ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕೊಡಗಿನಲ್ಲಿ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘ ರಚಿಸಲಾಗಿದೆ.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿಂದಲೇ ಸಂಘವನ್ನು ಆರಂಭಿಸಲಾಗಿದ್ದು, ಶನಿವಾರ ನಡೆಯಲಿರುವ ಬೆಣ್ಣೆಹಣ್ಣು ಕ್ಷೇತ್ರತೋತ್ಸವ ಕಾರ್ಯಕ್ರಮದಲ್ಲಿ ಈ ಸಂಘವನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತಿದೆ. ಸಂಘದಲ್ಲಿ ಆಸಕ್ತಿ ಇರುವ ಸುಮಾರು 300ಕ್ಕೂ ಅಧಿಕ ಮಂದಿ ಸದಸ್ಯರನ್ನು ಸೇರಿಸಲು ಪ್ರಯತ್ನಿಸಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಜಿಲ್ಲೆಯ ಹಲವು ಮಂದಿ ಬಟರ್ ಫ್ರೂಟ್, ಲಿಚ್ಚಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಇದು ಲಾಭದಾಯಕವೂ ಆಗಿದೆ. ಇತ್ತೀಚೆಗೆ ರಾಂಬೂಟಾನ್, ಮ್ಯಾಂಗೋಸ್ಟಿನ್ ಸೇರಿದಂತೆ ಮತ್ತಿತರ ವಿದೇಶಿ ತಳಿಯ ಹಣ್ಣುಗಳನ್ನು ಬೆಳೆಯಲು ಬೆಳೆಗಾರರು ಉತ್ಸುಕತೆ ತೋರಿದ್ದಾರೆ.

ಆದರೆ ಬೆಳೆಗಾರರಿಗೆ ಸೂಕ್ತವಾದ ಮಾರುಕಟ್ಟೆ ಹಾಗೂ ಫಸಲಿಗೆ ಪೂರಕವಾದ ಆದಾಯ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘ ಸ್ಥಾಪನೆ ಮಾಡಲಾಗುತ್ತಿದೆ.

ಸಂಘದ ಮೂಲಕ ಹಣ್ಣುಗಳನ್ನು ಬೆಳೆಯುವ ರೈತರಿಗೆ ಉತ್ತಮ ಗುಣಮಟ್ಟದ ಹಾಗೂ ಅತ್ಯುತ್ತಮ ತಳಿಯ ಗಿಡ ನೀಡುವುದು, ಹಣ್ಣಿನ ಗಿಡ ಬೆಳೆಸಲು ನಿರ್ವಹಣೆ ತರಬೇತಿ, ಕೃಷಿ ಪರಿಕರಗಳು ಹಾಗೂ ಔಷಧಿಗಳು, ಮಾರುಕಟ್ಟೆ ವ್ಯವಸ್ಥೆ ಕೂಡ ಕಲ್ಪಿಸಲು ಚಿಂತನೆ ನಡೆಸಲಾಗಿದೆ.

ಹಣ್ಣಿನ ಮಾರಾಟದ ಸಂದರ್ಭದಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಒಳ್ಳೆಯ ಆದಾಯ ಗಳಿಸಲು ಈ ಬೆಳೆಗಾರರ ಅಭಿವೃದ್ಧಿ ಸಂಘ ಸಹಕಾರ ನೀಡಲಿದೆ. ಕೊಡಗು ಮಾತ್ರವಲ್ಲದೆ ಇತರೆ ಕಡೆಯ ಹಣ್ಣಿನ ಬೆಳೆಗಾರರು ಸದಸ್ಯರಾಗಿ ಸಂಘದಲ್ಲಿ ಇರಲಿದ್ದಾರೆ. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಸಂಸ್ಥೆಯಲ್ಲಿ ಸಂಘಕ್ಕೆ ಕಚೇರಿ ಕೂಡ ಇರಲಿದೆ.

ಕಾರ್ಯಾಗಾರ, ಮಾಸ ಪತ್ರಿಕೆ:

ಸಂಘದಲ್ಲಿ ತೋಟಗಾರಿಕಾ ಪ್ರಯೋಗಿಕ ಕೇಂದ್ರದ ವಿಜ್ಞಾನಿಗಳು, ಬೆಳೆಗಾರರು, ಆಸಕ್ತ ವಿದ್ಯಾರ್ಥಿಗಳು ಹಾಗೂ ಖಾಸಗಿ ಸಂಸ್ಥೆಯ ಪ್ರಮುಖರು ಕೂಡ ಇರಲಿದ್ದಾರೆ. ಸಂಘದ ಮೂಲಕ ಸಭೆಗಳನ್ನು ನಡೆಸಿ ಮಾಹಿತಿ ಕಾರ್ಯಾಗಾರ ಮಾಡುವುದು, ಗಿಡಗಳನ್ನು ಬೆಳೆಸುವ ವಿಧಾನ ಸೇರಿದಂತೆ, ಮೂರು ತಿಂಗಳಿಗೊಮ್ಮೆ ಮಾಹಿತಿ ಪತ್ರಿಕೆಯನ್ನು ಕೂಡ ಪ್ರಕಟಿಸಲು ಚಿಂತಿಸಲಾಗಿದೆ.

ರು.1.10 ಲಕ್ಷ ದೇಣಿಗೆ:

ಭಾರತೀಯ ತೋಟಗಾರಿಕಾ ಸಂಸ್ಥೆಯ ನಿರ್ದೇಶಕರು ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿರಲಿದ್ದಾರೆ. ನವ ದೆಹಲಿಯ ಭಾರತೀಯ ಕೃಷಿ ಅನುಸಂಧಾನ್ ಪರಿಷತ್ ನಲ್ಲಿ ತೋಟಗಾರಿಕೆ ವಿಜ್ಞಾನ ವಿಭಾಗದಲ್ಲಿ ಉಪ ಮಹಾ ನಿರ್ದೇಶಕರಾಗಿರುವ ಡಾ.ಎಸ್. ಕೆ. ಸಿಂಗ್ ಈ ಸಂಘಕ್ಕೆ ಸುಮಾರು ರು. 1.10 ಲಕ್ಷ ವೈಯಕ್ತಿಯವಾಗಿ ದೇಣಿಗೆ ನೀಡುವ ಮೂಲಕ ಸಂಘಕ್ಕೆ ಪ್ರೋತ್ಸಾಹ ನೀಡಿದ್ದಾರೆ. ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘವನ್ನು ಇವರೇ ಉದ್ಘಾಟಿಸುತ್ತಿರುವುದು ವಿಶೇಷ.

...................

ಹಣ್ಣು ಬೆಳೆಗಾರಿಗೆ ಅವಕಾಶ

ಕೊಡಗಿನಲ್ಲಿ ಅತಿ ಹೆಚ್ಚು ಬೆಣ್ಣೆ ಹಣ್ಣು ಹಾಗೂ ಲಿಚ್ಚಿಯನ್ನು ಬೆಳೆಯುತ್ತಿದ್ದಾರೆ. ಆದರೆ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡುವುದು ಹಾಗೂ ಬೆಣ್ಣೆಹಣ್ಣಿನ ಕೃಷಿಯ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಅಂತಹ ಬೆಳೆಗಾರರಿಗೆ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘ ಸಹಕಾರಿಯಾಗಲಿದೆ. ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಹಣ್ಣಿನ ಬೆಳೆಗಾರರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

...........................

ನಾನು 1985ರಿಂದ ಬೆಣ್ಣೆ ಹಣ್ಣು ಕೃಷಿ ಮಾಡುತ್ತಿದ್ದೇನೆ. ನಾವು ಬೆಳೆಯುವ ಹಣ್ಣು ಮಾರಾಟ ಮಾಡಲು ಕೊಡಗಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಆದ್ದರಿಂದ ಬೆಳೆಗಾರರು ಒಟ್ಟು ಸೇರಿ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘ ಸ್ಥಾಪನೆ ಮಾಡಿದ್ದೇವೆ. ಇದರಿಂದ ಹಲವು ಬೆಳೆಗಾರರಿಗೆ ಸಂಘದಿಂದ ಅನುಕೂಲವಾಗಲಿದೆ.

-ಬೋಸ್ ಮಂದಣ್ಣ, ಸ್ಥಾಪಕ ಸದಸ್ಯ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘ............ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘವನ್ನು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವತಿಯಿಂದಲೇ ಆರಂಭಿಸಲಾಗುತ್ತಿದೆ. ವಿದೇಶಿ ಹಣ್ಣುಗಳು ಹಾಗೂ ಅಧಿಕ ಮೌಲ್ಯದ ಹಣ್ಣುಗಳನ್ನು ಬೆಳೆಯಲು ಉತ್ತೇಜನ ನೀಡುವುದು ಹಾಗೂ ಕೃಷಿ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಸಂಘ ರಚಿಸಲಾಗುತ್ತಿದೆ. ಹಣ್ಣು ಬೆಳೆಯುತ್ತಿರುವ ಬೆಳೆಗಾರರು ಸಂಘದಲ್ಲಿ ಸೇರಬಹುದು.

-ಡಾ.ಬಿ.ಎಂ. ಮುರುಳೀಧರ, ವಿಜ್ಞಾನಿ ಹಣ್ಣಿನ ವಿಭಾಗ, ಸಿ.ಎಚ್.ಇ.ಎಸ್. ಚೆಟ್ಟಳ್ಳಿ.

Share this article