ಕನ್ನಡಪ್ರಭ ವಾರ್ತೆ ಹನೂರು
ಕಾಡಾನೆ ದಾಳಿಗೊಳಗಾಗಿ ರೈತನೊಬ್ಬ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಜರುಗಿದೆ. ಹನೂರು ತಾಲೂಕಿನ ಬಿಆರ್‌ಟಿ ವಿಭಾಗದ ಲೊಕ್ಕನಹಳ್ಳಿ ಗ್ರಾಮದ ರೈತ ಬಸವಣ್ಣ ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಘಟನೆಯ ವಿವರ: ಲೊಕ್ಕನಹಳ್ಳಿ ಗ್ರಾಮದ ರೈತ ಬಸವಣ್ಣ ದಿನನಿತ್ಯದ ಕಾಯಕದಂತೆ ತಮ್ಮ ಜಮೀನಿನಲ್ಲಿ ಹಾಕಲಾಗಿರುವ ಆಲೂಗೆಡ್ಡೆ ಫಸಲಿನ ಕಾವಲಿಗಾಗಿ ಜಮೀನಿನಲ್ಲಿ ವಾಸ್ತವ್ಯ ಮಾಡಿದ್ದರು. ಗುರುವಾರ ರಾತ್ರಿ 11.30 ರಲ್ಲಿ ಬಿಆರ್‌ಟಿ ವಲಯ ಅರಣ್ಯ ಪ್ರದೇಶದಿಂದ ಬಂದಂತ ಕಾಡಾನೆ ಜಮೀನಿಗೆ ನುಗ್ಗಿ ಜಮೀನಿನಲ್ಲಿದ್ದ ರೈತ ಬಸವಣ್ಣನ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಧಳೀಯರು ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಕಾಮಗೆರೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು ತೀವ್ರವಾಗಿ ಗಾಯಗೊಂಡಿರುವುದರಿಂದ ರೈತ ಬಸವಣ್ಣನಿಗೆ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ರೈತನಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ: ರೈತನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸಾ ವೆಚ್ಚ ಭರಿಸುವುದರ ಮೂಲಕ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಜೊತೆಗೆ ಈ ಅರಣ್ಯದಂಚಿನ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಅಗ್ರಹಿಸಿದ್ದಾರೆ.ಕಾಡಾನೆ ದಾಳಿಯಿಂದ ರೈತ ತೀವ್ರ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ರೈತರ ಸಹಕಾರದೊಂದಿಗೆ ಅರಣ್ಯಾಧಿಕಾರಿಗಳು ಕಾಡುಪ್ರಾಣಿಗಳನ್ನು ನಿಯಂತ್ರಿಸಲು ರೈತರ ಜಮೀನುಗಳಿಗೆ ಬಾರದಂತೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಮೂಲಕ ಮಾನವ ಪ್ರಾಣಿ ಸಂಘರ್ಷ ತಪ್ಪಿಸಲು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
- ಹೊನ್ನೂರ್ ಪ್ರಕಾಶ್, ಜಿಲ್ಲಾಧ್ಯಕ್ಷರು, ರೈತ ಸಂಘ,ರಾತ್ರಿ ವೇಳೆ ರೈತರು ಅರಣ್ಯದಂಚಿನ ಜಮೀನುಗಳಲ್ಲಿ ಕಾಡುಪ್ರಾಣಿಗಳ ಬಗ್ಗೆ ಜಾಗೃತಿಯಿಂದ ಇರಬೇಕು. ಕಾಡು ಪ್ರಾಣಿಗಳು ರೈತರ ಜಮೀನುಗಳಲ್ಲಿ ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಬೇಕು. ರೈತಾಪಿ ವರ್ಗ ತೋಟದ ಜಮೀನುಗಳಲ್ಲಿ ವಾಸಿಸುವ ರೈತರು ಮತ್ತು ಜನಸಾಮಾನ್ಯರು ರಾತ್ರಿ ವೇಳೆ ಅರಣ್ಯದಂಚಿನಲ್ಲಿ ಬರುವುದರಿಂದ ಕಾಡುಪ್ರಾಣಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ರೈತನಿಗೆ ಆನೆ ದಾಳಿ ಮಾಡಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.- ವಾಸು, ವಲಯ ಅರಣ್ಯ ಅಧಿಕಾರಿ, ಬಿಆರ್‌ಟಿ