ದುಗ್ಗಳ ಸದಾನಂದ
ಕೈಕಾಡು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಆತಂಕದಲ್ಲೇ ದಿನ ಕಳೆಯುವಂತಾಗಿದೆ.
ಇಲ್ಲಿಗೆ ಸಮೀಪದ ಪಾರಾಣೆ ಗ್ರಾಪಂನ ಕೈಕಾಡು ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಳೆದ ನಾಲ್ಕು ದಿನಗಳಿಂದ ಗ್ರಾಮದ ತೋಟಗಳಿಗೆ ನುಗ್ಗಿ ಕಾಫಿ, ಬಾಳೆ, ಅಡಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ತಿಂದು, ತುಳಿದು ಹಾನಿಗೊಳಿಸುತ್ತಿವೆ.ತೋಟಗಾರಿಕಾ ಬೆಳೆಗಳನ್ನು ಧ್ವಂಸಗೊಳಿಸಿ ಅಪಾರ ನಷ್ಟ ಉಂಟುಮಾಡುತ್ತಿವೆ. ಇದಕ್ಕೆ ಅರಣ್ಯಾಧಿಕಾರಿ ಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಹಾಗೂ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೈಕಾಡು ಗ್ರಾಮದ ಬೆಳೆಗಾರ ಎನ್.ಕೆ. ಪ್ರಭು ಆರೋಪಿಸಿದ್ದಾರೆ.
ಇತ್ತ ಬೇತು ಗ್ರಾಮದ ಬೆಳೆಗಾರರೂ ಭಯಭೀತರಾಗಿದ್ದಾರೆ. ಬೇತು ಬಾಪೂಜಿ ಕಾಲೊನಿಯ ಮಂದಿ ರಾತ್ರಿಯಿಡೀ ಶಬ್ಧ ಮಾಡಿ ಆನೆಗಳು ದೂರ ತೆರಳುವಂತೆ ಮಾಡಿದ್ದಾರೆ. ಗುರುವಾರ ರಾತ್ರಿ ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪ ಕಾಡಾನೆಗಳು ತೆರಳಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸ್ಪಂದಿಸಿ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಪಾಲಕ ಅ೦ನಸೋ ಗುಡೆ, ಸಿಬ್ಬಂದಿಗಳಾದ ಸುರೇಶ್, ಬೋಪಣ್ಣ ದೇವರ ಕಾಡಿನಲ್ಲಿ ಪಟಾಕಿ ಸಿಡಿಸಿ ಪರಿಶೀಲಿಸಿದಾಗ ಆನೆ ಇರುವುದು ಕಂಡುಬಂದಿಲ್ಲ. ಬೇರೆ ಕಡೆಗೆ ತೆರಳಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಕೈಕಾಡು ಗ್ರಾಮದ ಮುಕ್ಕೋಟ ಕೇರಿ ದೇವರ ಕಾಡಿನಲ್ಲಿ ಮರಿಯಾನೆ ಸೇರಿದಂತೆ ಏಳು ಕಾಡಾನೆಗಳು ಇರುವುದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಇಲ್ಲಿಯ ಸುತ್ತಮುತ್ತಲಿನ ತೋಟಗಳಿಗೆ ಹಾನಿ ಮಾಡಿವೆ. ಮೂರು ದಿನಗಳಿಂದ ಕಾರ‍್ಯಾಚರಣೆ ಮಾಡಿಲ್ಲ. ಗುರುವಾರ ಬಂದಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟುವ ಕಾರ‍್ಯ ಕೈಗೊಳ್ಳಬೇಕು.
ಮಕ್ಕೋಟು ಮಹಾಲಕ್ಷ್ಮಿ ದೇವಾಲಯದ ಸುತ್ತಮುತ್ತ ಕಾಡಾನೆಗಳು ಸಂಚರಿಸಿದ್ದು ಗೋಚರಿಸಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಒಂಟಿ ಮನೆಯಲ್ಲಿ ನಾವಿಬ್ಬರೇ ವಾಸವಾಗಿದ್ದೇವೆ. ಕಾಡಾನೆಗಳ ಸಂಚಾರದಿಂದ ಭಯದಿಂದ ವಾಸಿಸುವಂತೆ ಆಗಿದೆ ಕೂಡಲೇ ಅರಣ್ಯ ಇಲಾಖೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಮೂರು ದಿನಗಳಿಂದ ದೇವರ ಕಾಡಿನಲ್ಲಿ ಕಾಡಾನೆಗಳಿವೆ. ಎರಡು ಕಾಡಾನೆಗಳು ಗೋಚರಿಸಿವೆ. ರಸ್ತೆ ಕ್ರಮಿಸಿ ಕಾಡುಗಳಿಗೆ ನುಸುಳಿರುವುದನ್ನು ಗುರುವಾರ ಬೆಳಿಗ್ಗೆ ಇಲ್ಲಿಯ ಕಾಲೊನಿ ನಿವಾಸಿಗಳು ನೋಡಿದ್ದಾರೆ. -ನಾರಾಯಣ ಸ್ಥಳೀಯ ನಿವಾಸಿ