ಉಡುಪಿ: ಅಮೆರಿಕದ ಅರಿಜೋನಾ ರಾಜ್ಯದ ಫೀನಿಕ್ಸ್ ಮಹಾನಗರದಲ್ಲಿರುವ ಉಡುಪಿ ಪುತ್ತಿಗೆ ಮಠದ ಶ್ರೀ ವೆಂಕಟಕೃಷ್ಣ ಮಂದಿರದ ಶ್ರೀ ಪದ್ಮಾವತಿ ದೇವಿಗೆ, ಭಕ್ತರೊಬ್ಬರು ಸುಮಾರು 2 ಕೋಟಿ ರು. ಮೌಲ್ಯದ ಸ್ವರ್ಣ ಕಿರೀಟವನ್ನು ಸಮರ್ಪಿಸಿದ್ದಾರೆ.
ಗುರುವಾರ ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ, ಶ್ರೀಪಾದರು ಈ ಸ್ವರ್ಣ ಕಿರೀಟವನ್ನು ವಿಶೇಷ ಪೂಜೆಯೊಂದಿಗೆ ಬಾಲಕೃಷ್ಣನಿಗೆ ಸಮರ್ಪಿಸಿ, ಬಳಿಕ ಅದನ್ನು ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರದಲ್ಲಿ ಶ್ರೀ ಪದ್ಮಾವತಿ ದೇವಿಗೆ ಅರ್ಪಿಸುವ ಸಲುವಾಗಿ ಸಂಬಂಧಿತ ಭಕ್ತರಿಗೆ ಹಸ್ತಾಂತರಿಸಿದರು.
ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯರು, ಗೋವರ್ಧನ ಕ್ಷೇತ್ರದ ವ್ಯವಸ್ಥಾಪಕ ಶ್ರೀ ಕುಂಜಾರರು, ಸುಗುಣ ಸಂಧ್ಯಾ ಗುರುಕುಲದ ಕಾರ್ಯದರ್ಶಿ ಅಭಿಷೇಕ್ ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.4 ವರ್ಷಗಳ ಹಿಂದೆ ಫಿನಿಕ್ಸ್‌ನ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸುಮಾರು 4 ಕೋಟಿ ರು. ಮೌಲ್ಯದ ಸ್ವರ್ಣ ಕಿರೀಟವನ್ನು ಭಕ್ತರು ಸಮರ್ಪಿಸಿದ್ದರು.ಈ ಕ್ಷೇತ್ರಕ್ಕಾಗಿ ಈಗಾಗಲೇ 4 ಎಕರೆ ವಿಶಾಲ ಜಮೀನನ್ನು ಪಡೆದುಕೊಳ್ಳಲಾಗಿದ್ದು, ಶ್ರೀಪಾದರ ಶಿಷ್ಯರಾದ ಅಲ್ಲಿನ ಪ್ರಧಾನ ಅರ್ಚಕ ಕಿರಣ್ ಆಚಾರ್ಯ ಅವರ ನೇತೃತ್ವದಲ್ಲಿ ಆಗಮಶಾಸ್ತ್ರದ ನಿಯಮಾನುಸಾರ ಭವ್ಯ, ವೈಭವೋಪೇತ ಹಾಗೂ ಬೃಹತ್ ದೇವಸ್ಥಾನದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.