ಜಮಖಂಡಿ ನಗರದ ರಾಮತೀರ್ಥ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ರಾಮತೀರ್ಥ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಗುರುವಾರದ ಮಧ್ಯರಾತ್ರಿ 1 ಗಂಟೆಯ ಅವಧಿಯಲ್ಲಿ ರಾಮತೀರ್ಥ ಬೆಟ್ಟದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಗಸ್ತು ತಿರುಗುತ್ತಿದ್ದ ಗ್ರಾಮೀಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಎಂ.ಎ. ವಾಲೇಕಾರ ಹಾಗೂ ಪೊಲೀಸ್ ಸಿಬ್ಬಂದಿ ಆನಂದ ಮಾಳಿ ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಅಗ್ನಿಶಾಮಕ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಂ.ಪಿ.ಹೂಗಾರ ಹಾಗೂ ಉಪವಲಯ ಅರಣ್ಯಾಧಿಕಾರಿ ವಿನೋದ ಜೈನಾಪುರ ಅವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿತು. ಸುಮಾರು 3 ರಿಂದ 4 ಕಿ.ಮೀ ವ್ಯಾಪ್ತಿಗೆ ಬೆಂಕಿ ಪಸರಿಸಿದ್ದು, ಹಲವಾರು ಗಿಡಮರಗಳಿಗೆ ಹಾನಿಯಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಪ್ರವೀಣ ಆದಗೊಂಡ, ಅರಣ್ಯ ವೀಕ್ಷಕ ಸೋಮು ಅಮಾತೆ, ಚಾಲಕ ಸುಭಾಷ ವಾರದ ಹಾಗೂ ಅಗ್ನಿಶಾಮಕ ದಳದ ಕೆ.ಬಿ. ಮುಲ್ಲಾ, ಬಸವರಾಜ ರೊಳ್ಳಿ, ಶ್ರವಣಕುಮಾರ ವಾಜಂತ್ರಿ, ಡಿ.ವೈ. ಮೆಳ್ಳಿಗೇರಿ, ಸೋಮಶೇಖರ ಕುಂಬಾರ, ಕುಮಾರ ದೊಡಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.