ಸಿದ್ದಾಪುರ: ಅರಣ್ಯಹಕ್ಕು ಕಾಯಿದೆಗೆ ಮಾನ್ಯತೆ ನೀಡದೇ ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಸರ್ವಾಧಿಕಾರ ಪ್ರವೃತ್ತಿ ಕುರಿತು ಅರಣ್ಯ ಅತಿಕ್ರಮಣದಾರರು ಕ್ಯಾದಗಿ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕ್ಯಾದಗಿ ವಲಯ ಅರಣ್ಯ ಕಚೇರಿ ಆವರಣದಲ್ಲಿ ಇತ್ತೀಚೆಗೆ ಜರುಗಿತು.
ಸಭೆಯಲ್ಲಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮತ್ತು ಸಿಪಿಐ ಸೀತಾರಾಮ, ಎಸಿಎಫ್ ಪವಿತ್ರಾ ಮತ್ತು ಆರ್‌ಎಫ್‌ಒ ಮಹೇಶ್ ದೇವಡಿಗ ಮುಂತಾದವರಿದ್ದರು. ಕಂದಾಯ, ಪೊಲೀಸ್, ಸ್ಥಳೀಯ ಸಂಸ್ಥೆ ಮತ್ತು ಪಂಚನಾಮೆ ಇಲ್ಲದೇ ತೆರವುಗೊಳಿಸುವ ಸಂದರ್ಭದಲ್ಲಿನ ನೀತಿ, ನಿಯಮ ಜಾರಿ ಮಾಡದೇ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಕಾನೂನುಬಾಹಿರವೆಂದು ಅರಣ್ಯ ಅತಿಕ್ರಮಣದಾರರು ಆಕ್ಷೇಪ ವ್ಯಕ್ತಪಡಿಸಿದರು. ಮೌಲ್ಯಯುತ ಬೆಳೆ ನಾಶಪಡಿಸಲು ಅವಕಾಶವಿಲ್ಲ, ಬೆಳೆ ಹರಾಜು ಮಾಡಿಲ್ಲ, ಅಮಾನವೀಯ ರೀತಿಯ ಅಡಕೆ ಗಿಡ ಕಡಿದಿರುವುದು ಹಾಗೂ ಜಂಟಿ ಸರ್ವೆ ಇಲ್ಲದೇ ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆಯ ಕೃತ್ಯವನ್ನು ಅರಣ್ಯವಾಸಿಗಳಿಂದ ಕಾನೂನು ಸಂಘರ್ಷಕ್ಕೆ ಸಂಬಂಧಿಸಿದ ಪ್ರಶ್ನೆಗಳು ವ್ಯಕ್ತವಾದವು.
ಅಡಕೆ ಗಿಡ ಕಡಿದು ನಾಶಪಡಿಸಿದ ಅರಣ್ಯ ಸಿಬ್ಬಂದಿಯನ್ನು ಸಭೆಯ ಮುಂದೆ ಹಾಜರಪಡಿಸಲು ಅರಣ್ಯವಾಸಿಗಳು ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ಅರಣ್ಯ ಅತಿಕ್ರಮಣದಾರರು ಅರಣ್ಯ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಕೆಲವು ಕಾಲ ಸಭೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಹೋರಾಟಗಾರರ ಪ್ರಮುಖರ ಮಧ್ಯಸ್ಥಿಕೆಯಲ್ಲಿ ವಾತಾವರಣ ತಿಳಿಗೊಳಿಸಲಾಯಿತು.ತಾಲೂಕಿನ ವ್ಯಾಪ್ತಿಯಲ್ಲಿನ ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ಹಿರಿಯ ಅರಣ್ಯ ಅಧಿಕಾರಿಯೊಂದಿಗೆ ಸಿದ್ದಾಪುರದಲ್ಲಿ ಹದಿನೈದು ದಿನಗಳಲ್ಲಿ ಸಭೆ ಆಯೋಜಿಸುವುದಾಗಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಎಸಿಎಫ್ ಪವಿತ್ರಾ ಮತ್ತು ಆರ್‌ಎಫ್‌ಒ ಮಹೇಶ ದೇವಡಿಗ ಆಶ್ವಾಸನೆ ನೀಡಿದರು.