ಯಲ್ಲಾಪುರ: ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ದುರಾಡಳಿತದ ಬಗ್ಗೆ ಪಟ್ಟಣದ ಮನೆ ಮನೆಗೆ ತೆರಳಿ, ಜನರಿಗೆ ಮನವರಿಕೆ ಮಾಡಿಕೊಡುವ ಅಭಿಯಾನವನ್ನು ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಹೇಳಿದರು.
ಪಟ್ಟಣದಲ್ಲಿ ಕೆರೆಗಳ ಅಭಿವೃದ್ಧಿಗೆ ಪಪಂ ಆಡಳಿತ, ಶಾಸಕರು ಗಮನ ಹರಿಸಿಲ್ಲ. ಹಿಂದೂ ರುದ್ರಭೂಮಿಯನ್ನು ಕಡೆಗಣಿಸಲಾಗಿದೆ. ಹಂದಿ, ಬೀದಿ ನಾಯಿಗಳ ಕಾಟ ಹೆಚ್ಚಿದೆ. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಟ್ರಾಫಿಕ್ ವ್ಯವಸ್ಥೆ ಸರಿಯಾಗಿಲ್ಲ. ಬೀದಿಗಳಲ್ಲಿ ಮೀನು ಮಾರಾಟ ನಡೆಯುತ್ತಿದೆ. ಪಪಂ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಜಿ+೨ ಮನೆಗಳ ಹಂಚಿಕೆಯಾಗಿಲ್ಲ. ಎರಡು ವರ್ಷಗಳ ಹಿಂದೆ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ನೀಲನಕ್ಷೆ ಮಾಡಲಾಗಿತ್ತು. ಆ ಕುರಿತು ಮಾಹಿತಿ ಸಾರ್ವಜನಿಕರಿಗೆ ನೀಡಲಾಗಿಲ್ಲ. ಪಟ್ಟಣದಲ್ಲಿ ಸಮಸ್ಯೆಗಳ ಮಹಾಪೂರವೇ ಇದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಆಗದೇ ಇರುವ ಕಾರಣ, ಈ ವೈಫಲ್ಯದ ವಿರುದ್ಧ ಬಿಜೆಪಿ ಸಮರ ಸಾರಿ, ಹೋರಾಟ ಚುರುಕುಗೊಳಿಸಲಿದೆ ಎಂದರು.
ಪಕ್ಷದ ಮುಖಂಡ ರಾಮು ನಾಯ್ಕ ಮಾತನಾಡಿ, ಸ್ವಚ್ಛತೆ, ಬೀದಿದೀಪ, ನೀರಿನ ವ್ಯವಸ್ಥೆ ಕಲ್ಪಿಸುವುದು ಸ್ಥಳೀಯ ಆಡಳಿತದ ಆದ್ಯತೆಯಾಗಬೇಕು. ಹಿಂದಿನ ಅವಧಿಯಲ್ಲಿ ಆ ಕಾರ್ಯಗಳೇ ಸರಿಯಾಗಿ ಆಗಿಲ್ಲ. ಅಭಿವೃದ್ಧಿಗೆ ಅವಕಾಶಗಳು ಸಾಕಷ್ಟಿದ್ದರೂ ಅದನ್ನು ಅಧಿಕಾರದಲ್ಲಿದ್ದವರು ಮಾಡಿಲ್ಲ ಎಂದು ದೂರಿದರು.ಬೇಡ್ತಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ತಂದಾಗ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿಫಲವಾಗಿತ್ತು. ಈಗ ತಟ್ಟಿಹಳ್ಳ ಡ್ಯಾಂನಿಂದ ನೀರು ತರುವ ಸಿದ್ಧತೆ ನಡೆದಿದೆ. ಸರಿಯಾಗಿ ಶುದ್ಧೀಕರಣ ಮಾಡಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಈ ಯೋಜನೆಯೂ ವಿಫಲವಾಗಲಿದೆ. ಈ ಕುರಿತು ಸಂಬಂಧಪಟ್ಟವರು ಜಾಗ್ರತೆ ವಹಿಸಬೇಕು. ಜಾತ್ರೆಗೆ ಅಗತ್ಯವಾದ ಸಿದ್ಧತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳಬೇಕು. ಕೊನೆಯ ಹಂತದಲ್ಲಿ ಅರೆಬರೆ ಸಿದ್ಧತೆ ಮಾಡುವುದು ಸರಿಯಲ್ಲ. ಕಳೆದ ಜಾತ್ರೆಯಲ್ಲಿ ಅಂಗಡಿ ಹರಾಜಿನಲ್ಲಿ ಅವ್ಯವಹಾರ ನಡೆದಿದೆ. ಅದರ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು. ಈ ಜಾತ್ರೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಪಂ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಆಡಳಿತ ಅವ್ಯವಸ್ಥೆಯ ಆಗರವಾಗಿದೆ. ಜನರ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಟೀಕಿಸಿದರು.ವಕೀಲ ಗಣೇಶ ಪಾಟಣಕರ್ ಅವರನ್ನು ಈ ಪಕ್ಷದ ಪ್ರಮುಖರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷದ ವಿವಿಧ ಸ್ತರಗಳ ಪದಾಧಿಕಾರಿಗಳಾದ ಶ್ರೀನಿವಾಸ ಗಾಂವ್ಕರ, ರಜತ ಬದ್ದಿ, ರಜನಿ ಚಂದ್ರಶೇಖರ, ತುಳಸಿದಾಸ ನಾಯ್ಕ, ರವಿ ದೇವಡಿಗ, ಬಾಬಣ್ಣ ದೇಸಾಯಿ, ವಿನಾಯಕ ಪತ್ತರ್, ಉಲ್ಲಾಸ ಕೊಂಡೆಮನೆ, ನಯನಾ ಇಂಗಳೆ, ಆದಿತ್ಯ ಗುಡಿಗಾರ, ಗಜಾನನ ನಾಯ್ಕ ತಳ್ಳಿಕೇರಿ ಉಪಸ್ಥಿತರಿದ್ದರು.