ಮುರಳೀಧರ್ ಶಾಂತಳ್ಳಿ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಶನಿವಾರ ರಾತ್ರಿ ಮಾದಾಪುರ ಮತ್ತು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣ ಕೋಟೆಬೆಟ್ಟಕ್ಕೆ ಹೊಂದಿಕೊಂಡಂತಿರುವ ಮೂವತ್ತೊಕ್ಲು ಸಮೀಪದ ಆರಂಗಲ್ ಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿದ್ದು ಭಾರಿ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ.
ಶನಿವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಬೆಂಕಿ ಜ್ವಾಲೆ ಉರಿಯಲು ಆರಂಭಿಸಿದ್ದು, ಮಾದಾಪುರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಸೋಮವಾರಪೇಟೆಗೆ ಹಿಂತಿರುಗುತ್ತಿದ್ದ ಶಾಸಕ ಡಾ. ಮಂತರ್ ಗೌಡ ಅವರು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿಯೊಂದಿಗೆ ರಾತ್ರಿ 10 ರವೇಳೆಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಸ್ಥಳದ ಸಮೀಪಕ್ಕೆ ಅಗ್ನಿಶಾಮಕ ದಳದ ವಾಹನ ತೆರಳಲು ಸಾಧ್ಯವಾಗಲಿಲ್ಲ. ನಂತರ ಮಾರುತಿ ಓಮ್ನಿ ಮತ್ತು ಪಿಕ್‌ಅಪ್ ವಾಹನದಲ್ಲಿ ಸುಮಾರು 5 ಕಿ.ಮೀ. ತೆರಳಿದ್ದಾರೆ. ಅಲ್ಲದೇ ಸುಮಾರು 1 ಕಿ.ಮೀ. ನಷ್ಟು ದೂರ ನಡೆದುಕೊಂಡು ಹೋಗಿದ್ದಾರೆ. ಮಧ್ಯರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ರಾತ್ರಿ 1.30 ಗಂಟೆವರೆಗೂ ಇದ್ದು ಹಿಂತಿರುಗಿದ್ದಾರೆ.ಶಾಸಕ ಮಂತರ್ ಗೌಡ ಅವರು ಇಲಾಖಾ ಸಿಬ್ಬಂದಿಯೊಂದಿಗೆ ಸುಮಾರು 1 ಕಿಮೀ ಕಾಲ್ನಡಿಗೆಯಲ್ಲೇ ತೆರಳಿ ಕಾಡ್ಗಿಚ್ಚು ಹರಡಿರುವ ಪ್ರದೇಶವನ್ನು ವೀಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಭಾನುವಾರ ಹಗಲು ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖಾ ಸಿಬ್ಬಂದಿ ಸ್ಥಳೀಯ ತೋಟದ ಮಾಲೀಕರ ಸಹಕಾರದೊಂದಿಗೆ ಬೆಂಕಿ ಜ್ವಾಲೆ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.
ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯ ಆರ್‌ಎಫ್‌ಒ ಚೇತನ್, ಡಿಆರ್‌ಎಫ್‌ಒ ಜಗದೀಶ್ ಮತ್ತು ಸಿಬ್ಬಂದಿ ಉಪಆರಕ್ಷಕ ನಿರೀಕ್ಷಕ ರಮೇಶ್‌ಕುಮಾರ್ ಮತ್ತು ಸಿಬ್ಬಂದಿ, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಈಶ್ವರ್, ನಾಗೇಶ್, ಚೇತನ್, ಪ್ರಕಾಶ್, ಚೇತನ್‌ಕುಮಾರ್, ಬರ್ಮಣ್ಣ ಪೂಜಾರಿ, ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಬಿ.ಬಿ.ಸತೀಶ್, ಕೆ.ಎ.ಯಾಕೂಬ್, ಚೇತನ್, ರಜತ್ ಸೇರಿದಂತೆ ಹಲವರು ರಾತ್ರಿ ವೇಳೆ ಕಾಡ್ಗಿಚ್ಚು ಸ್ಥಳಕ್ಕೆ ತೆರಳಿದ್ದರು.ಕಿಡಿಗೇಡಿಗಳ ಕೃತ್ಯ-ಅರಣ್ಯ ಇಲಾಖೆ ಶಂಕೆ?: ಬಿಸಿಲಿನ ಧಗೆ ಜಾಸ್ತಿಯಾಗುತ್ತಿದ್ದು, ಮಾದಾಪುರ ಸಮೀಪದ ಆರಂಗಲ್ ಬೆಟ್ಟ( ಆರಂಗಲ್ ಮಂಟಿ) ಪ್ರದೇಶದ ಅರಣ್ಯದಲ್ಲಿ ಶನಿವಾರ ರಾತ್ರಿ ಹೊತ್ತಿಕೊಂಡಿರುವ ಬೆಂಕಿ ಕಾಡ್ಗಿಚ್ಚಿನಿಂದ ಆಗಿರುವುದಿಲ್ಲ. ಯಾವುದೋ ಕಿಡಿಗೇಡಿಗಳು ಎಸಗಿರುವ ಕೃತ್ಯವಾಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದ ಪ್ರಸಿದ್ಧ ಪ್ರವಾಸೀ ತಾಣಗಳಲ್ಲೊಂದಾದ ಕೋಟೆ ಬೆಟ್ಟ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹೊತ್ತಿಕೊಂಡಿರುವ ಬೆಂಕಿ ಜ್ವಾಲೆ ಇಡೀ ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲಿನ ತೋಟಗಳಿಗೆ ಹರಡಿದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗವ ಸಾಧ್ಯವಿದೆ ಎಂದು ಸ್ಥಳೀಯರು ಹಾಗೂ ಪ್ರವಾಸಿಗರು ಆತಂಕವ್ಯಕ್ತಪಡಿಸುತ್ತಾರೆ. ಹಾಗೆಯೇ ಕಿಡಿಗೇಡಿಗಳ ಕೃತ್ಯವಾಗಿದ್ದರೆ ಅವರನ್ನು ಪತ್ತೆಹಚ್ಚಿ ಶಿಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.
ಶನಿವಾರ ರಾತ್ರಿ 9.30ರ ವೇಳೆ ಮಾದಾಪುರ , ಗರಗಂದೂರು ಗ್ರಾಮಗಳ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಕುಸುಬೂರು ಕೆರೆ ಬಳಿ ಬರುತ್ತಿದ್ದಾಗ ಕೋಟೆ ಬೆಟ್ಟ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡ್ಗಿಚ್ಚು ಕಂಡುಬಂತು. ರಾತ್ರಿ ಅಗ್ನಿಶಮನಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಾಗಿ ಅಗ್ನಿ ನಂದಿಸಲು ಭಾನುವಾರ ಹಗಲು ಕಾರ್ಯಾಚರಣೆ ಮುಂದುವರಿಸಲು ಸೂಚಿಸಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.