ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ ಇತ್ತೀಚಿನ ದಶಕಗಳಲ್ಲಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಹುಣಸೂರು ರೈತರು ದಿಢೀರ್ ಶ್ರೀಮಂತಿಕೆಯ ದುರಾಸೆಗೆ ಒಳಗಾಗಿ ನೈಸರ್ಗಿಕ ಕೃಷಿಯತ್ತ ಒಲವು ತೋರುತ್ತಿಲ್ಲವೆಂದು ತಹಸೀಲ್ದಾರ್ ಜೆ. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ತಾಲೂಕು ಕೃಷಿಕ ಸಮಾಜ ಹಾಗೂ ಚೌಡಿಕಟ್ಟೆ ಗ್ರಾಮದ ಶಿವಯೋಗ ದೇಸೀ ಗೋಶಾಲಾ ಟ್ರಸ್ಟ್ ಸಹಯೋಗದಲ್ಲಿ ಟ್ರಸ್ಟ್ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿಪರ ರೈತರಿಗೆ ಸನ್ಮಾನ ಹಾಗೂ ಮಣ್ಣು ಸಂರಕ್ಷಣೆ ಕುರಿತಾದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಆರ್ಥಿಕವಾಗಿ ಸದೃಢವಾಗಿರುವ ವಿಶ್ವದ ಅನೇಕ ದೇಶಗಳಲ್ಲಿ ಅನ್ನಕ್ಕಾಗಿ ಪರದಾಡುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ ಇತ್ತೀಚಿನ ದಶಕಗಳಲ್ಲಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಭೂಮಿಗಳು ಲೇಔಟ್ ಮಾಲೀಕರ ಪಾಲಾಗುತ್ತಿದೆ. ದಿಢೀರ್ ಶ್ರೀಮಂತರಾಗಬೇಕೆನ್ನುವ ದುರಾಸೆಯೇ ಇದಕ್ಕೆ ಮೂಲ ಕಾರಣ. ಇದು ಹೀಗೆ ಮುಂದುವರೆದರೆ ಭಾರತದಲ್ಲೂ ಅನ್ನಕ್ಕೆ ಅಭಾವ ಸೃಷ್ಟಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಶಿವಯೋಗ ದೇಸೀ ಗೋಶಾಲಾ ಟ್ರಸ್ಟ್ ಮುಖ್ಯಸ್ಥ ಯೋಗಗುರು ಮತ್ತು ಪ್ರಗತಿಪರ ರೈತ ತಮ್ಮಯ್ಯ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ನೀಡಲು ರೈತನಿಂದ ಮಾತ್ರ ಸಾಧ್ಯ. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯ. ಭೂಮಿಯನ್ನು ಮಾರಾಟ ಮಾಡಬೇಡಿ. ರೈತರಲ್ಲಿ ಒಗ್ಗಟ್ಟಿದ್ದರೆ ಸಾಧಿಸುವುದು ಸುಲಭ. ಪದೇ ಪದೇ ಅಧಿಕಾರಿಗಳ ಬಳಿ ಹೋಗುವುದನ್ನು ನಿಲ್ಲಿಸಿ. ನಿಮ್ಮಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಲು ಸಮನ್ವಯತೆ ಸಾಧಿಸಿರಿ ಎಂದು ಕಿವಿಮಾತು ಹೇಳಿದರು.ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಸಂಸ್ಥೆ (ಎನ್ಐಆರ್ಸಿಎ) ಮುಖ್ಯಸ್ಥ ಡಾ.ಎಸ್. ರಾಮಕೃಷ್ಣನ್ ಮಣ್ಣಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿ, ಯಾವುದೇ ಕೃಷಿಕಾರ್ಯ ನಡೆಸುವ ಮುನ್ನ ನಿಮ್ಮ ಭೂಮಿಯ ಮಣ್ಣಿನ ಗುಣ ಮತ್ತು ಫಲವತ್ತತೆಯನ್ನು ಪರೀಕ್ಷಿಸಿಕೊಂಡು ಮುಂದಡಿ ಇಡುವುದನ್ನು ರೂಢಿಸಿಕೊಳ್ಳಲು ಕೋರಿದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ, 2025ರ ರಾಷ್ಟ್ರೀಯ ಕೃಷಿ ದಿನಾಚರಣೆಯ ಧ್ಯೇಯವಾಕ್ಯವು ವಿಕಸಿತ ಭಾರತ 2047-ಭಾರತೀಯ ಕೃಷಿ ಜಾಗತೀಕರಣಗೊಳಿಸಲು ಎಫ್ಪಿಒ(ಪಾರ್ಮರ್ಸ್ಪ್ರೊಡ್ಯೂಸರ್ಸ್ಆರ್ಗನೈಸೇಷನ್) ಪಾತ್ರ ಎಂಬುದಾಗಿದೆ ಎಂದರು. ಕೃಷಿಕ ಸಮಾಜದ ಅಧ್ಯಕ್ಷ ಆರ್. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಹೇಶ್, ಕೃಷಿಕ ಸಮಾಜದ ನಿರ್ದೇಶಕರಾದ ಸುಭಾಷ್, ರೇವಣ್ಣ, ಅರವಿಂದ, ಜಯರಾಮೇಗೌಡ, ಕುಮಾರಬೋವಿ, ಮಂಜುನಾಥ್, ಹೊನ್ನಪ್ಪರಾವ್ ಕಾಳಿಂಗೆ, ಕೃಷ್ಣೇಗೌಡ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು, ರೇಷ್ಮೆ ಇಲಾಖೆ ಅಧಿಕಾರಿ ಸಿ. ಶಂಕರ್, ಕೃಷಿ ಅಧಿಕಾರಿ ವೆಂಕಟಾಚಲ ಸೇರಿದಂತೆ ರೈತರು ಭಾಗವಹಿಸಿದ್ದರು. 20ಕ್ಕೂ ಹೆಚ್ಚು ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.