ಕಾರ್ಕಳ: ತಾಲೂಕಿನ ಹೆರ್ಮುಂಡೆ ಗ್ರಾಮದ ಮರ್ಣೆ ಗ್ರಾಮ ಪಂಚಾಯಿತಿ ಹಾಗೂ ಶಿರ್ಲಾಲು ಗ್ರಾಮ ಪಂಚಾಯಿತಿ ಗಡಿ ಭಾಗವಾದ ಚಿಂಕರಮಲೆ ಅರಣ್ಯ ವ್ಯಾಪ್ತಿಯ ಉಯ್ಯಾಲೆ ಪಾದೆ ಎಂಬಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡ್ಗಿಚ್ಚಿಗೆ ಅನೇಕ ಮರಗಳು ಆಹುತಿಯಾಗಿದೆ.
ಉಯ್ಯಾಲೆ ಪಾದೆಯು ಮುಖ್ಯ ರಸ್ತೆಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿದೆ. ಗುಂಡಮ, ಮಾರ್ಲಿ, ಕುದುರು ಪ್ರದೇಶಗಳಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ಸುಮಾರು 50 ಜನರ ತಂಡ ನಂದಿಸಿದೆ.
ಕಳೆದ ಮೂರು ದಿನಗಳಿಂದ ಉರಿಯುತ್ತಿರುವ ಕಾಡ್ಗಿಚ್ಚಿಗೆ ಸುಮಾರು ಮೂರು ಹೆಕ್ಟೇರ್ ಪ್ರದೇಶ ಆಹುತಿಯಾಗಿದೆ. ಈಗಾಗಲೇ ಅರಣ್ಯಾಧಿಕಾರಿಗಳ ತಂಡವು ಕಾಡ್ಗಿಚ್ಚು ಹಬ್ಬಿರುವ ಪ್ರದೇಶಕ್ಕೆ ಭೇಟಿ ನೀಡಿ ಕಾಡ್ಗಿಚ್ಚು ಆರಿಸುವಲ್ಲಿ ನಿರತವಾಗಿದೆ. ಶಿರ್ಲಾಲು ಪ್ರದೇಶದಲ್ಲಿ ಕಾಡ್ಗಿಚ್ಚು ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ.ಉಯ್ಯಾಲೆ ಪಾದೆ ಪ್ರದೇಶದಲ್ಲಿ ಸ್ಥಳೀಯರು ಜೇನು ತೆಗೆಯಲು ಹೋದ ಸಂದರ್ಭದಲ್ಲಿ ಜೇನು ಹುಳಗಳನ್ನು ಓಡಿಸುವಾಗ ಹಾಕಿದ ಹೊಗೆಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.ಕಾರ್ಕಳ ತಾಲೂಕು ವಲಯ ಅರಣ್ಯಾ ವಲಯಾಧಿಕಾರಿ ಪ್ರಭಾಕರ್ ಕುಲಾಲ್, ಸಿಡಿಲಿನ ಬೆಂಕಿ ಬಿದ್ದಿರಬಹುದು ಎಂದು ಮಾಹಿತಿ ನೀಡಿದ್ದಾರೆ.