ಪಾರಂಪರಿಕ ಅರಣ್ಯವಾಸಿಗಳಿಗೆ ಅರ್ಜಿ ಮಂಜೂರಿಗೆ ಸಂಬಂಧಿಸಿ ನಿರ್ದಿಷ್ಟವಾದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಅಂಶ ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿಯಾಗಿದೆ. ಅಲ್ಲದೇ, ಮೂರು ತಲೆಮಾರಿನ ವೈಯಕ್ತಿಕ ನಿರ್ದಿಷ್ಟ ದಾಖಲೆ ಅವಶ್ಯವೆಂದು ತಪ್ಪಾಗಿ ಅಥೈಸಲಾಗುತ್ತಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಶಿರಸಿ: ಅಸ್ತಿತ್ವವಿಲ್ಲದ ಕಾನೂನುಬಾಹಿರ ಅರಣ್ಯ ಹಕ್ಕು ಸಮಿತಿಯಿಂದ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನಾ ಪ್ರಕ್ರಿಯೆ ಜರುಗಿಸುತ್ತಿರುವುದು ಹಾಗೂ ಮಂಜೂರಿಗೆ ಸಂಬಂಧಪಟ್ಟಂತೆ ಮೂರು ತಲೆಮಾರಿನ ನಿರ್ದಿಷ್ಟ ಸಾಕ್ಷಿಗಳನ್ನು ಆಪೇಕ್ಷಿಸಿ ಸಮಿತಿಯು ನೋಟಿಸ್ ನೀಡಿರುವುದಕ್ಕೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು ನಗರದ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಶನಿವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮೇಲ್ವಿಚಾರಣಾ ಸಮಿತಿಯ ಸಭೆಯ ನಡವಳಿಕೆಗೆ ಸಲ್ಲಿಸಿದ ಆಕ್ಷೇಪ ಮತ್ತು ತಕರಾರಿನ ಪ್ರತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪಾರಂಪರಿಕ ಅರಣ್ಯವಾಸಿಗಳಿಗೆ ಅರ್ಜಿ ಮಂಜೂರಿಗೆ ಸಂಬಂಧಿಸಿ ನಿರ್ದಿಷ್ಟವಾದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಅಂಶ ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿಯಾಗಿದೆ. ಅಲ್ಲದೇ, ಮೂರು ತಲೆಮಾರಿನ ವೈಯಕ್ತಿಕ ನಿರ್ದಿಷ್ಟ ದಾಖಲೆ ಅವಶ್ಯವೆಂದು ತಪ್ಪಾಗಿ ಅಥೈಸಲಾಗುತ್ತಿದೆ. ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು ಮೂರು ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಬೇಕೆಂಬ ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯ ನವದೆಹಲಿಯಲ್ಲಿ ನೀಡಿದ ಸ್ಪಷ್ಟೀಕರಣ ಹಾಗೂ ಗುಜರಾತ್ ಉಚ್ಚ ನ್ಯಾಯಾಲಯ ನೀಡಿದ ಆದೇಶ ರಾಜ್ಯ ಮೇಲ್ವಿಚಾರಣಾ ಸಮಿತಿ ನಿರ್ಲಕ್ಷಿಸಿದೆ ಎಂದು ಆಕ್ಷೇಪಣೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಗಣೇಶ ಮಂಜುನಾಥ ನಾಯ್ಕ ಚಂದಾವರ, ನಾರಾಯಣ ಈಶ್ವರ ದೇಶಭಂಡಾರಿ ಹೊನ್ನಾವರ, ಗೋವಿಂದ ಬಾನು ಮೂರೂರು, ದಿನಕರ ಈಶ್ವರ ಹೊದಕೆ ಶಿರೂರು ಇವರು ಉಪಸ್ಥಿತರಿದ್ದರು.ಸದಸ್ಯರಿಲ್ಲದೇ ಸಮಿತಿ ಪ್ರಕ್ರಿಯೆ: ಜಿಲ್ಲಾ ಮತ್ತು ಉಪ ವಿಭಾಗ ಅರಣ್ಯ ಹಕ್ಕು ಸಮಿತಿಯಲ್ಲಿ ನಾಮ ನಿರ್ದೇಶಿತ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಿಂದ ಆಯ್ಕೆಯಾದ ಮೂರು ಸದಸ್ಯರನ್ನು ಒಳಗೊಂಡ ಒಟ್ಟು ಆರು ಸದಸ್ಯರು ಇರಬೇಕೆಂಬ ಅಂಶ ಅರಣ್ಯ ಹಕ್ಕು ಕಾಯಿದೆಯಲ್ಲಿ ಉಲ್ಲೇಖ ಇದೆ. ಆದರೆ, ಅದನ್ನು ಪರಿಗಣನೆ ತೆಗೆದುಕೊಳ್ಳದೇ, ನಾಮನಿರ್ದೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ಕೇವಲ ಅಧಿಕಾರ ವರ್ಗದವರ ಸದಸ್ಯರ ಉಪಸ್ಥಿತಿಯಲ್ಲಿ ಅರಣ್ಯ ಹಕ್ಕು ಸಮಿತಿ ಪುನರ್ ಪರಿಶೀಲನಾ ಪ್ರಕ್ರಿಯೆ ಜರುಗಿಸುತ್ತಿರುವುದು ಖೇದಕರವೆಂದು ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.