ಹೊನ್ನಾವರ: ಮೂರು ತಲೆಮಾರು ಪೂರ್ವದ ಷರತ್ತಿನ ಮಾನದಂಡದ ವಿವಾದವನ್ನು ಬಗೆಹರಿಸಲು ಕೇಂದ್ರಕ್ಕೆ ಭೂಸಾಗುವಳಿದಾರರ ಹೋರಾಟ ಸಮಿತಿ ಒತ್ತಾಯಿಸಿದೆ.
ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಮಾಜಿ ಜಿಪಂ ಸದಸ್ಯರಾದ ಪಿ.ಟಿ.ನಾಯ್ಕ ಮೂಡ್ಕಣಿ, ಪಿ.ಎಸ್.ಭಟ್ಟ ಉಪ್ಪೋಣಿ, ಸಹಕಾರಿ ಧುರೀಣ ವಿ.ಎನ್.ಭಟ್ಟ ಅಳ್ಳಂಕಿ, ಮಂಜುನಾಥ ನಾಯ್ಕ, ಗೇರುಸೊಪ್ಪ, ಬಾಲಕೃಷ್ಣಗೌಡ ನೇತೃತ್ವದ ನಿಯೋಗವು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಹೈಗುಂದದಲ್ಲಿ ಭೇಟಿ ಮಾಡಿ ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನದಿಂದ ಜಿಲ್ಲೆಯಲ್ಲಿ ಉಂಟಾಗಿರುವ ದ್ವಂದ್ವ ಮತ್ತು ಗೊಂದಲವನ್ನು ಬಗೆಹರಿಸಲು ಮಧ್ಯ ಪ್ರವೇಶ ಮಾಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಹಕ್ಕುಕಾಯ್ದೆಯ ಅನುಷ್ಠಾನದ ಕುರಿತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಭಿನ್ನ ನಿಲುವು ಮತ್ತು ಕೆಲವು ಅಧಿಕಾರಿಗಳ ದ್ವಂದ್ವದಿಂದ ಅರಣ್ಯ ಭೂಮಿ ಸಾಗುವಳಿದಾರರಿಗೆ ಅನ್ಯಾಯ ಆಗುವ ಸಾಧ್ಯತೆ ಕುರಿತು ನಿಯೋಗವು ಸಂಸದರಲ್ಲಿ ತಮ್ಮ ಆತಂಕ ವ್ಯಕ್ತ ಪಡಿಸಿತು.ಅರಣ್ಯ ಹಕ್ಕುಕಾಯ್ದೆಯ ಇತರ ಪಾರಂಪರಿಕ ಅರಣ್ಯವಾಸಿ ವ್ಯಾಖ್ಯೆಗೆ ತಿದ್ದುಪಡಿ ಸೂಚಿಸಿರುವ ರಾಜ್ಯ ಸರ್ಕಾರದ ಪ್ರಸ್ತಾವ ಮತ್ತು ರಾಜ್ಯದ ಪ್ರಸ್ತಾವಕ್ಕೆ ಕೇಂದ್ರ ನೀಡಿರುವ ಸ್ಪಷ್ಟನೆಯ ಬಗ್ಗೆ ನಿಯೋಗ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಲು ರಾಜ್ಯದಲ್ಲಿ ಮೀನಮೇಷ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಯ ಅರಿವು ತಮಗಿದೆ. ಅರಣ್ಯಹಕ್ಕು ಕಾಯ್ದೆಯ ಅನುಷ್ಠಾನದಲ್ಲಿನ ವೈಫಲ್ಯ ಮತ್ತು ಗೊಂದಲದ ನಿವಾರಣೆ ಬಗ್ಗೆ 2012ರಲ್ಲಿ ಕೆಲವು ನಿಯಮಗಳನ್ನು ರೂಪಿಸಿದ್ದು ಕೇಂದ್ರ ಬುಡಕಟ್ಟು ಮಂತ್ರಾಲಯವು 2014ರಲ್ಲಿ ಸೂಕ್ತ ನಿರ್ದೇಶನವನ್ನು ನೀಡಿದೆ. ಅರಣ್ಯವಾಸಿಗಳ ಹಿತಕಾಯುವ ಕೆಲಸವನ್ನು ರಾಜ್ಯ ಸರ್ಕಾರವೇ ಮಾಡಬೇಕು ಎಂದರು.