- ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಆದೇಶ । ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸೂಚನೆ
---ಪಾಯಿಂಟರ್ಸ್
ಸಫಾರಿಗೆ ಶೇ.50ರಷ್ಟು ಸಿಬ್ಬಂದಿ ಮಾತ್ರ ಬಳಸತಕ್ಕದ್ದುಕಾಡಿನೊಳಗೆ ಕೇವಲ ಸಫಾರಿ ಬಸ್ಸುಗಳ ಮಾತ್ರ ಬಳಕೆ
ಬಂಡೀಪುರದಿಂದ 100 ಕಿ.ಮೀ ಸುತ್ತಳತೆಯಲ್ಲಿ 25 ಶಿಬಿರ
ಸಫಾರಿಯ ಆದಾಯದಲ್ಲಿ ಶೇ.35 ಜನರ ಒಳಿತಿಗೆ ಬಳಕೆ---
ಮಾನವ- ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ನ.7ರಂದು ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಫೆ.21ರಿಂದ ಷರತ್ತುಬದ್ಧವಾಗಿ ಪುನಾರಂಭಿಸಲು ನಿರ್ಧರಿಸಿದ್ದು, ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿ ಶುಕ್ರವಾರ ಮೈಸೂರು, ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಬಹುತೇಕ ಶನಿವಾರದಿಂದ ಸಫಾರಿ ಆರಂಭಿಸಲು ಅಧಿಕೃತ ಆದೇಶ ಹೊರಡಿಸಲಾಗುವುದು. ಈ ಆದೇಶದಲ್ಲಿರುವ ಷರತ್ತುಗಳ ಉಲ್ಲಂಘಿಸದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.ನ.7ಕ್ಕಿಂತ ಮೊದಲು ಬಳಕೆಯಾಗುತ್ತಿದ್ದ ಸಫಾರಿ ವಾಹನಗಳ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿ ಮಾತ್ರವೇ ಬಳಸಬೇಕು. ಹೆಚ್ಚಾಗಿ ಬಸ್‌ಗಳ ಮೂಲಕ ಸಫಾರಿ ನಡೆಸಬೇಕು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕ್ಯಾಂಪರ್ ಮತ್ತು ಜೀಪ್ ಬಳಕೆ ಮಾಡಬೇಕು ಎಂದರು.
ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಮಾನವ-ಪ್ರಾಣಿ ಸಂಘರ್ಷ ಇರುವ ಪ್ರದೇಶವನ್ನು ಗುರುತಿಸಬೇಕು. ಆ ಪ್ರದೇಶದಲ್ಲಿ ಗಸ್ತು ಹೆಚ್ಚಸಬೇಕು. ವನ್ಯಜೀವಿಗಳು ವಸತಿ ಪ್ರದೇಶಕ್ಕೆ ಬಾರದಂತೆ, ಜೀವಹಾನಿ, ಬೆಳೆ ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಬಂಡೀಪುರ ಅರಣ್ಯದ ಗಡಿಯಲ್ಲಿ 100 ಕಿ.ಮೀ. ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ 5 ಕಿ.ಮೀ.ಗೆ ಒಂದರಂತೆ 25 ಶಿಬಿರ ನಿರ್ಮಿಸಿ ಪ್ರತಿ ಶಿಬಿರದಲ್ಲಿ ಸ್ಥಳೀಯರನ್ನು ಕಾಡಿನ ಮಿತ್ರ ಎಂದು ನೇಮಕ ಮಾಡಿಕೊಂಡು ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇರಿಸಬೇಕು. ಥರ್ಮಲ್ ಡ್ರೋನ್, ವಾಹನ ಇತ್ಯಾದಿ ಯಾವುದೇ ಸೌಲಭ್ಯ ಬೇಕಿದ್ದರೂ ಲಿಖಿತ ಮೂಲಕ ಪ್ರಸ್ತಾವನೆ ಸಲ್ಲಿಸಿ ಎಂದರು.
---
ಇಲಾಖೆಯ ಖಾಯಂ ಸಿಬ್ಬಂದಿ ಕಡ್ಡಾಯವಾಗಿ ಅರಣ್ಯ ಇಲಾಖೆ ಆಂತರಿಕವಾಗಿ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶವನ್ನು ಬಳಕೆ ಮಾಡಬೇಕು. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊರಗುತ್ತಿಗೆಯ ಸಿಬ್ಬಂದಿ ಇ-ಸ್ಟ್ರೈಪ್ ಬಳಕೆ ಮಾಡಲಿ. ಸಮಗ್ರ ಕಮಾಂಡ್ ಕೇಂದ್ರದಲ್ಲಿ ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಡಬೇಕು. ಕೂಡಲೇ ಸಂಬಂಧಿತ ವಲಯದ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಬೇಕು. 1926 ದೂರವಾಣಿ ಸಂಖ್ಯೆಗೆ ಬರುವ ದೂರು ಮತ್ತು ಮಾಹಿತಿಗೆ ತಕ್ಷಣ ಸ್ಪಂದಿಸಬೇಕು ಎಂದು ಅವರು ಸೂಚಿಸಿದರು.---ನಾಗರಹೊಳೆ, ಬಂಡೀಪುರ, ಬಿಆರ್‌ಟಿಯಲ್ಲಿ ಈ ಬೇಸಿಗೆಯಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ಹುಲಿ, ಚಿರತೆ, ಆನೆ ಸೇರಿದಂತೆ ಯಾವುದೇ ವನ್ಯಜೀವಿ ಆಹಾರ ಮತ್ತು ನೀರಿನ ಕೊರತೆಯಿಂದ ಕಾಡಿನಿಂದ ಹೊರ ಬಾರದಂತೆ ಕ್ರಮ ಕೈಗೊಳ್ಳಬೇಕು.- ಈಶ್ವರ ಖಂಡ್ರೆ, ಅರಣ್ಯ ಸಚಿವ
---ಸಫಾರಿ ಆರಂಭಕ್ಕೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಫೆ.18ರಂದು ಸೂಚನೆ ನೀಡಿದ್ದಾರೆ. ಸಫಾರಿ ಆರಂಭಕ್ಕೆ ಅರಣ್ಯ ಇಲಾಖೆ ಕೇಂದ್ರ ಕಚೇರಿಯಿಂದ ಅಧಿಕೃತ ಆದೇಶ ಇನ್ನೂ ನಮ್ಮ ಕೈ ಸೇರಿಲ್ಲ. ಆದೇಶದ ಪ್ರತಿ ಬಂದ ಬಳಿಕ ಸಫಾರಿ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ.- ಎಸ್. ಪ್ರಭಾಕರನ್, ಸಿಎಫ್, ಬಂಡೀಪುರ