ರಾಮನಗರ: ಪ್ರಾಣಿ ಮತ್ತು ಮಾನವ ಸಂಘರ್ಷವನ್ನು ತಡೆಯುವಲ್ಲಿ ವಿಫಲರಾಗಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ರೈತಸಂಘ ಮತ್ತು ಜಯ ಕರ್ನಾಟಕ ಜನಪರ ವೇದಿಕೆ ಮುಖಂಡರು ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕನಕಪುರ ತಾಲೂಕಿನ ಕುನೂರು ಬಳಿ ಎರಡು ಕಾಡಾನೆಗಳು ಹಾರೊಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ್ದರೂ ಈವರೆಗೆ ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಕೂಡಲೇ ಅರಣ್ಯ ಸಚಿವರು ಕಾಡಾನೆಗಳ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಒತ್ತಾಯ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಎರಡು ಕಾಡಾನೆಗಳ ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನ ಕಾರಣವಾಗಿದೆ. ಆನೆಗಳನ್ನು ನಾಡಿನಿಂದ ಕಾಡಿಗೆ ಓಡಿಸಲು ಬಳಸುವ ಅವೈಜ್ಞಾನಿಕ ಕ್ರಮಗಳು ಆನೆಗಳ ದುರಂತ ಸಾವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಕಾಡಾನೆಗಳು, ಚಿರತೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿಯನ್ನು ತಡೆಯುವಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ರೈತರು ಆನೆ ಹಾಗೂ ಹುಲಿ ದಾಳಿಯಿಂದ ಸಾವನ್ನಪ್ಪುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಒಂದು ಕಡೆ ಕಂದಾಯ ಇಲಾಖೆ ರೈತರಿಗೆ ಕಾಡಂಚಿನ ಪ್ರದೇಶಗಳಲ್ಲಿ ಕಳೆದ ನಲವತ್ತು ವರ್ಷಗಳಿಂದ ಸಾಗುವಳಿ ಕೊಟ್ಟು ವ್ಯವಸಾಯ ಮಾಡಲು ಹೊರಟರೆ, ಅರಣ್ಯ ಇಲಾಖೆಯವರು ಬ್ರಿಟಿಷರ ಕಾಲದ ನಕ್ಷೆಯನ್ನು ತೋರಿಸಿ ಅರಣ್ಯ ಪ್ರದೇಶವೆಂದು ರೈತರಿಗೆ ದಿನ ನಿತ್ಯ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ವಿಜಯ್ ಕುಮಾರ್, ತಿಮ್ಮೇಗೌಡ, ವೆಂಕಟೇಶ್, ಕುಮಾರ್, ರವಿ, ಶಂಭುಗೌಡ, ಕಿರಣ್ ಸಾಗರ್ ಮತ್ತಿತರರು ಹಾಜರಿದ್ದರು.
ರೈತಸಂಘ ಮತ್ತು ಜಯ ಕರ್ನಾಟಕ ಜನಪರ ವೇದಿಕೆ ಮುಖಂಡರು ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.