ಒತ್ತುವರಿ ತೆರವಿಗೆ ಹೋದ ಅರಣ್ಯ ಸಿಬ್ಬಂದಿ, ರೈತನೊಂದಿಗೆ ತಳ್ಳಾಟ

KannadaprabhaNewsNetwork |  
Published : Jun 13, 2026, 02:15 AM IST
ಶಿಗ್ಗಾಂವಿ ತಾಲೂಕು ಶಿವಪುರ ತಾಂಡಾದಲ್ಲಿ ಅರಣ್ಯ ಭೂಮಿ ಒತ್ತುವರಿಗೆ ತೆರಳಿದ್ದ ಸಿಬ್ಬಂದಿ ಮತ್ತು ರೈತನೊಬ್ಬನ ನಡುವೆ ಜಟಾಪಟಿ ನಡೆದಿರುವ ದೃಶ್ಯ. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನ ಶಿವಪುರ ತಾಂಡಾ ಬಳಿ ಅರಣ್ಯ ಮತ್ತು ಕಂದಾಯ ಭೂಮಿ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರೈತರ ನಡುವೆ ನೂಕಾಟ ತಳ್ಳಾಟ ಆಗಿರುವ ಘಟನೆ ಗುರುವಾರ ನಡೆದಿದ್ದು, ಆ ವಿಡಿಯೋ ಇದೀಗ ವೈರಲ್ ಆಗಿದೆ.

ಶಿಗ್ಗಾಂವಿ: ತಾಲೂಕಿನ ಶಿವಪುರ ತಾಂಡಾ ಬಳಿ ಅರಣ್ಯ ಮತ್ತು ಕಂದಾಯ ಭೂಮಿ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರೈತರ ನಡುವೆ ನೂಕಾಟ ತಳ್ಳಾಟ ಆಗಿರುವ ಘಟನೆ ಗುರುವಾರ ನಡೆದಿದ್ದು, ಆ ವಿಡಿಯೋ ಇದೀಗ ವೈರಲ್ ಆಗಿದೆ.

ನೀರಲಕಟ್ಟಿ, ಶಿವಪುರ ತಾಂಡಾ ಹಾಗೂ ಸುತ್ತಮುತ್ತ 87 ಎಕರೆ 20 ಗುಂಟೆ ಡೀಮ್ಡ್ ಅರಣ್ಯ ಪ್ರದೇಶವಿದೆ. ಇದಕ್ಕೆ ಹೊಂದಿಕೊಂಡು ಕಂದಾಯ ಇಲಾಖೆ ಹಾಗೂ ವಾಸಕ್ಕೆ ಮೀಸಲಿಟ್ಟ ಜಾಗವಿದೆ. ಈ ಜಾಗದಲ್ಲಿಯೇ ಈರಪ್ಪ ಸೇರಿದಂತೆ ಹಲವು ಕುಟುಂಬಗಳು ಉಳುಮೆ ಮಾಡುತ್ತಿವೆ.

ತಮ್ಮ ಜಮೀನಿಗೆ ಹೊಂದಿಕೊಂಡಿರುವ ಅರಣ್ಯ ಇಲಾಖೆ ಜಮೀನಿನಲ್ಲಿ ಪ್ರತಿ ವರ್ಷವೂ ಮರಗಳನ್ನು ಕಡಿದು ಅರಣ್ಯ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಕಾವಲಿಗೆ ಸಿಬ್ಬಂದಿ ನಿಯೋಜಿಸಿದ್ದರು. ಮಂಗಳವಾರ ಹಾಗೂ ಬುಧವಾರ ಕೆಲ ರೈತರು, ಅರಣ್ಯ ಪ್ರದೇಶದ ಮರಗಳನ್ನು ಕಡಿದು ಹಾಕಿದ್ದರು. ಇದನ್ನು ಗಮನಿಸಿದ್ದ ಅಧಿಕಾರಿಗಳು, ಎರಡು ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಒತ್ತುವರಿ ತೆರವು ಮಾಡಲು ಸ್ಥಳಕ್ಕೆ ಹೋಗಿದ್ದರು. ಆಗ ಸ್ಥಳದಲ್ಲಿದ್ದ ಈರಪ್ಪ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ರೈತ ಈರಪ್ಪ ನಾನು ಜಮೀನು ಬಿಟ್ಟು ಹೋಗುವುದಿಲ್ಲ ಎಂದು ಅಲ್ಲಿಯೇ ಕುಳಿತಿದ್ದಾನೆ. ಏನೋ ಕುಡಿಯಲು ಮುಂದಾದ ರೈತನನ್ನು ಅರಣ್ಯ ಸಿಬ್ಬಂದಿ ತಡೆದು, ಕೈಕಾಲುಗಳನ್ನು ಹಿಡಿದು ಹೊತ್ತುಕೊಂಡು ಹೋಗಿದ್ದಾರೆ. ಇಷ್ಟೆಲ್ಲ ನಡೆದಾಗ ರೈತ ಕುಟುಂಬದ ಕೆಲವು ಮಹಿಳೆಯರು ಆಗಮಿಸಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಣ್ಣು ಎಸೆದಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ.

ಅರಣ್ಯ ಇಲಾಖೆ ಜಾಗ ಒತ್ತುವರಿ ಮಾಡಿದ್ದಾರೆ. ಜಂಟಿ ಸಮೀಕ್ಷೆ ಮಾಡಿ, ಅರಣ್ಯ ಜಾಗ ಗುರುತಿಸಲಾಗಿದೆ. ಒತ್ತುವರಿ ತೆರವಿಗೆ ಮುಂದಾಗಿದ್ದಕ್ಕೆ ರೈತರು ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಅರಣ್ಯ ಜಾಗ ಉಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹಾವೇರಿ ಡಿಎಫ್‌ಐ ಅಕ್ಷಯ ಪ್ರಕಾಶಕರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

40 ವರ್ಷ ಹಿಂದೆ ಸತ್ತವರ ಹೆಸರಲ್ಲಿ ಜಮೀನು ಮಾರಾಟ!
ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಲ್ಲರೂ ಕಾಳಜಿ ವಹಿಸಿ: ಡಿಸಿ ಸಿ.ಎನ್. ಶ್ರೀಧರ್