ಕಾರವಾರ: ಅತಿಕ್ರಮಣದಾರರಿಗೆ ಅನ್ಯಾಯವಾಗುವ ಹಿನ್ನೆಲೆಯಲ್ಲಿ ಕಸ್ತೂರಿರಂಗನ್ ವರದಿ ಜಾರಿಗೆ ತರಬಾರದು ಎಂದು ಅರಣ್ಯಹಕ್ಕು ಹೋರಾಟಗಾರರ ವೇದಿಕೆಯ ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ರಾಮಾ ಮೊಗೇರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸ್ತೂರಿರಂಗನ್ ವರದಿಗೆ ರಾಜ್ಯದ 1,597 ಹಳ್ಳಿಗಳು ಒಳಪಡುತ್ತವೆ. ಅವುಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಇದರಲ್ಲಿ ಉತ್ತರಕನ್ನಡದ 724 ಹಳ್ಳಿಗಳು ಸೇರಿವೆ. ಇದರಿಂದ ಜಿಲ್ಲೆಯ ಜನರು ಬೀದಿಗೆ ಬೀಳಬೇಕಾಗಲಿದೆ ಎಂದರು.ಜಿಲ್ಲೆಯ ಜನಪ್ರತಿನಿಧಿಗಳು ಈ ವರದಿ ಜಾರಿಗೊಳಿಸದಂತೆ ಸರಕಾರದ ಮೇಲೆ ಒತ್ತಡ ತರಬೇಕು. ಸಿಂಗಳಿಕ ಸಂರಕ್ಷಣೆ ತಾಣ ಎಂದು ಹೊನ್ನಾವರದಿಂದ ಅಂಕೋಲಾವರೆಗೆ ಪ್ರದೇಶ ಗುರುತಿಸಲಾಗಿದೆ. ಇದರಿಂದ ಅತಿಕ್ರಮಣದಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಆದೇಶ ಹಿಂಪಡೆಯಲು ಆಗ್ರಹಿಸಿ ಸಂಸದರನ್ನು ಆಗ್ರಹಿಸಲಾಗುವುದು. ಶೀಘ್ರವೆ ನಿಯೋಗವು ರಾಜ್ಯದ ವಿವಿಧ ಸಂಸದರನ್ನು ಭೇಟಿ ಮಾಡಲಿದೆ ಎಂದರು.ಜಿಲ್ಲೆಯಲ್ಲಿ ದಶಕಗಳಿಂದ ಅರಣ್ಯ ಅತಿಕ್ರಮಣದಾರರು ಭೂಮಿ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅರಣ್ಯ ಅತಿಕ್ರಮಣ ಸಕ್ರಮ ಮಾಡುವ ನಿಯಮಗಳನ್ನು ಸರಳೀಕರಣ ಮಾಡುವ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿ ಇದೆ. ಕೇಂದ್ರ ಸರ್ಕಾರ ಈ ಬಗ್ಗೆ ಕಾನೂನು ರೂಪಿಸಬೇಕು ಎಂದರು.ಈ ಹಿಂದೆ ಐದಾರು ಬಾರಿ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಗಮನ ನೀಡಲಿಲ್ಲ. ಈ ಸಲ ಆಯ್ಕೆಯಾದ ಸಂಸದರು ನಮ್ಮ ಸಮಸ್ಯೆಗೆ ಕಿವಿಗೊಡುವ ವಿಶ್ವಾಸ ನಮಗೆ ಇದೆ. ಕಾರಣ ಅವರಿಗೆ ಸಮಸ್ಯೆಯ ಅರಿವಿದೆ. ಅವರ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವ ಯತ್ನ ಮಾಡಲಾಗುವುದು ಎಂದರು. ನಾಗೇಶ ದೇವಾಡಿಗ, ಸಲೀಲ, ಖಯಾಮ ಕೋಲಾ, ಸಿದ್ದು ಪಾಟೀಲ, ಶಿವಾನಂದ ನಾಯ್ಕ ಇದ್ದರು. ಶ್ರೀವತ್ಸ ಶಾಂಡಿಲ್ಯಗೆ ಸುವರ್ಣ ಮಹೋತ್ಸವ ಪ್ರಶಸ್ತಿ
ಕಾರವಾರ: ಛಾಯಾಗ್ರಹಣ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆ ಗುರುತಿಸಿ ಛಾಯಾಗ್ರಾಹಕ ಶ್ರೀವತ್ಸ ಶಾಂಡಿಲ್ಯ ಅವರಿಗೆ ಇತ್ತೀಚೆಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಲಾಯಿತು.ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ, ಇತರ ಗಣ್ಯರು ಪಾಲ್ಗೊಂಡಿದ್ದರು.ಕರ್ನಾಟಕದ ಸಂಸ್ಕೃತಿ , ವ್ಯಾಪಾರ ಮತ್ತು ಮಾಹಿತಿ ತಂತ್ರಜ್ಞಾನದ ಕ್ಷೇತ್ರ ಮಹತ್ವಪೂರ್ಣ ಘಟನೆಗಳನ್ನು ತಮ್ಮ ಛಾಯಾಚಿತ್ರದ ಮೂಲಕ ವಿವಿಧ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸುಮಾರು ಮೂರುವರೆ ದಶಕಗಳಿಂದ ತೆರೆದಿಟ್ಟಿದ್ದಾರೆ.