ಮುಂಡರಗಿ: ಪರೀಕ್ಷೆ ಭಯವು ಶಕ್ತಿ ಮತ್ತು ಸಾಮರ್ಥ್ಯ ಕುಗಿಸುತ್ತದೆ.ಆದ್ದರಿಂದ ಮಕ್ಕಳು ಪರೀಕ್ಷೆಯ ಭಯ ಬಿಟ್ಟು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಓದಬೇಕು ಎಂದು ಶ್ರೀ ಸ್ವಾಮಿ ವಿವೇಕಾನಂದ ಶಾಲೆಯ ಆಡಳಿತಾಧಿಕಾರಿ ಪ್ರೊ.ಸಿ.ಎಸ್. ಅರಸನಾಳ ಸಲಹೆ ನೀಡಿದರು.
ಬಾಲಕ-ಶಿಕ್ಷಕ-ಪಾಲಕ ಇವರು ಸರಿಯಾಗಿ ಕಾರ್ಯನಿರ್ವಹಿಸಿದರೆ ಫಲಿತಾಂಶ ಸುಧಾರಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸತತ ಅಧ್ಯಯನ ಮಾಡಿದರೆ ತಮ್ಮ ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಶ್ರದ್ಧೆ, ಉತ್ಸಾಹ, ಬುದ್ಧಿವಂತಿಕೆಯಿಂದ ಅಭ್ಯಾಸ ಮಾಡಿದರೆ ಆ ಓದಿಗೆ ಸೂಕ್ತ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದರು.
ಶ್ರೀ ಜ.ಅ .ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಸಿ. ಚಕ್ಕಡಿಮಠ ತರಬೇತಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ಓದಿನ ಜತೆಗೆ ಬರವಣಿಗೆ ಮಾಡಬೇಕು. ಅನ್ಯ ವಿಷಯಗಳು ಮನಸ್ಸನ್ನು ಪ್ರವೇಶಿಸದಂತೆ ಎಚ್ಚರವಹಿಸಬೇಕು ಎಂದರು.ಕಾರ್ಯಕ್ರಮದಲ್ಲಿ ವಿ.ಎಚ್. ಹೊಳೆಯಮ್ಮನವರ, ಎನ್.ಎಂ.ಕುಕನೂರ,ಎಚ್.ಎನ್. ಗೌಡ್ರ, ಮಂಜುನಾಥ ತೆಗ್ಗಿನಮನಿ, ಪರಮೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪೂರ ಸ್ವಾಗತಿಸಿದರು. ವಿ.ಮನೋಹರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗುಡದೀರಪ್ಪ ಲಿಂಗಶೆಟ್ಟರ ನಿರೂಪಿಸಿ ವಂದಿಸಿದರು.