ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಎಚ್.ಡಿ.ಪುರ ಗ್ರಾಮದಲ್ಲಿ ಪಿ.ಎಂ.ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಕಲಾ ಸಂಭ್ರಮ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ನೂತನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ಎಲ್ಲಾ ಹಳ್ಳಿಗಳೂ ಅಭಿವೃದ್ಧಿಯ ಪಥದಲ್ಲಿ ಸಾಗಿವೆ. ಎಲ್ಲ ಕಡೆಗೆ ಅಗತ್ಯವಾದ ನಾಗರೀಕ ಸೌಲಭ್ಯಗಳನ್ನು ಒದಗಿಸಲು ಎಲ್ಲ ಭಿನ್ನತೆಗಳನ್ನು ಮರೆತು ಕೆಲಸ ಮಾಡುತ್ತಿದ್ದೇನೆ ಎಂದರು.ಕ್ಷೇತ್ರದಲ್ಲಿ ಈಗಾಗಲೇ 13 ಪಬ್ಲಿಕ್ ಶಾಲೆಗಳು ತಲೆ ಎತ್ತಿವೆ. ಕೆರೆಗಳು ಮತ್ತು ಚೆಕ್ ಡ್ಯಾಂಗಳ ನಿರ್ಮಾಣ ಆಗಿದೆ. ರೈತರಿಗೆ ಗುಣಾತ್ಮಕ ಶಿಕ್ಷಣ ಒದಗಿಸಲು ನಾಲ್ಕಾರು ಕಡೆ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲು ಕಾಮಗಾರಿ ವೇಗದಲ್ಲಿ ನಡೆಯುತ್ತಿದೆ.
ಆರೋಗ್ಯ ಕ್ಷೇತ್ರದ ಕಡೆಗೂ ಗಮನ ನೀಡಲಾಗಿದೆ. ಹೊಳಲ್ಕೆರೆ ಕೇಂದ್ರದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಆಗಿದೆ. ಇದರಿಂದ ಸುತ್ತಲ ಜನರಿಗೆ ಆಗಿರುವ ಅನುಕೂಲವನ್ನು ಜನರೇ ಮೆಚ್ಚಿಕೊಂಡಿದ್ದಾರೆ. ವೈದ್ಯರು, ಸಹಾಯಕರು, ಸಿಬ್ಬಂದಿಗೆ ವಸತಿ ಗೃಹಗಳ ನಿರ್ಮಾಣ ಆಗಿದೆ ಎಂದರು.
ತಾಲೂಕಿನಾದ್ಯಂತ 13 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ. ಇದರಿಂದ ಎಲ್‌ಕೆಜಿಯಿಂದ ಹಿಡಿದು ಪಿಯುಸಿವರೆಗೆ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದು ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟುಗಳನ್ನು ಪಡೆಯಲು ಅನುಕೂಲವಾಗಲಿದೆ. ಇನ್ನೂ ಎರಡು ತಿಂಗಳಲ್ಲಿ ಮತ್ತೆ ಎರಡು ಶಾಲೆಗಳನ್ನು ನೀಡುತ್ತೇನೆ. ಮಕ್ಕಳ ಸಂಖ್ಯೆಗನುಗುಣವಾಗಿ ಎಷ್ಟು ಶಾಲೆಗಳು ಬೇಕಾಗುತ್ತದೆನ್ನುವುದನ್ನು ನಿರ್ಧರಿಸಿ ಮುಂದಿನ ದಿನಗಳಲ್ಲಿ ಶಾಲೆಗಳನ್ನು ಮಂಜೂರು ಮಾಡಿಸುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.