ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿಕೆ । ತುಮಕೂರಿನಲ್ಲಿ ನಡೆದ 15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಗಾಜಿನಮನೆಯ ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ವೇದಿಕೆಯಲ್ಲಿ ಜಿಲ್ಲಾ ಕಸಾಪ ಆಯೋಜಿಸಿದ್ದ 15 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಜನರ ಸಮಸ್ಯೆಗಳಿಗೆ ದ್ವನಿಯಾಗದ ಸಾಹಿತ್ಯ ಬೂಸಾ ಎಂಬ ದಿ.ಬಿ.ಬಸವಲಿಂಗಪ್ಪ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಸಾಹಿತಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುವುದು ನಮಗೆ ದೊರೆತ ಜವಾಬ್ದಾರಿಯಿಂದ ನುಣುಚಿಕೊಂಡಂತೆ. ಈ ಬಗ್ಗೆ ಎಲ್ಲಾ ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.ಕನ್ನಡ ಸಾಹಿತ್ಯವನ್ನು ನಾನು ಕಾಯ ಚರಿತ, ಅಕಾಯಚರಿತ ಹಾಗೂ ಕಾಯಕ ಚರಿತರು ಎಂದು ವಿಂಗಡಿಸುಸ್ತೇನೆ. ಕಾಯ ಚರಿತರಿಗಿಂತ, ಯಾವುದೇ ಸ್ವಾರ್ಥವಿಲ್ಲದೆ ಸಾಮೂಹಿಕ ಹಿತವನ್ನೇ ಗುರಿಯಾಗಿಸಿಕೊಂಡು ರಚಿತವಾದ ಅಕಾಯ ಚರಿತರ (ಜನಪದರ) ಸಾಹಿತ್ಯ, ವ್ಯಕ್ತಿ ಪ್ರಜ್ಷೆಗಿಂತ ಸಾಮೂಹಿಕ ಪ್ರಜ್ಞೆಗೆ ಹೆಚ್ಚು ಒತ್ತು ನೀಡಿದೆ. ಸಮುದಾದ ದ್ವನಿಗಳಾಗಿವೆ. ಅಲ್ಲಮರ ಅನುಭವ ಮಂಟಪದಲ್ಲಿದ್ದ ಕಾಯಕ ಚರಿತರು ರಚಿಸಿರುವ ವಚನ ಸಾಹಿತ್ಯ, ಚಾತುರ್ವಣದ ವಿರುದ್ಧ ಸಾರಿಸ ಸಮರ ವಿಶ್ವಮಾನವ ಪಜ್ಞೆಗೆ ಪೂರಕವಾಗಿದೆ. ಸಾಹಿತಿಗಳು ಉತ್ವರದಾಯಿತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿವೆ ಎಂದು ಪ್ರೊ.ಎಸ್.ಜಿ. ಸಿದ್ದರಾಮಯ್ಯ ನುಡಿದರು.
ಸಮ್ಮೇಳನದ ಸ್ಮರಣ ಸಂಚಿಕೆ ಕಲ್ಪ ಸೌರಭ ಬಿಡುಗಡೆ ಮಾಡಿ ಮಾತನಾಡಿದ ಸಿಇಓ ಜಿ.ಪ್ರಭು, ವಿಜ್ಞಾನ ತಂತ್ರಜ್ಞಾನಗಳು, ಎಲ್ಲರಿಗೂ ಶಿಕ್ಷಣ ಇಲ್ಲದ ಕಾಲದಲ್ಲಿಯೂ ಕನ್ನಡ ಭಾಷೆ ಸಾವಿರಾರು ವರ್ಷಗಳಿಂದ ಕನ್ನಡಿಗರಿಗೆ ನೆಲೆ ಒದಗಿಸಿದೆ. ಆದರೆ ಎಲ್ಲರಿಗೂ ಜ್ಞಾನ ದೊರೆತ ನಂತರ ಕನ್ನಡವನ್ನು ಉಳಿಸಬೇಕೆಂಬ ಪ್ರಯತ್ನ ನಡೆದಿದೆ. ಅಧುನಿಕತೆ ಮತ್ತು ದುಡಿಮೆಯ ಭರಾಟೆಯಲ್ಲಿ ಎಲ್ಲರೂ ವಿಜ್ಞಾನ, ತಂತ್ರಜ್ಞಾನದತ್ತ ಹೊರಳಿ ವ್ಯಕ್ತಿತ್ವ ವಿಕಸನಕ್ಕೆ ಮೂಲವಾದ ಸಾಹಿತ್ಯ ಮೂಲೆಗುಂಪಾಗಿದೆ. ಭಾಷೆ ಮನುಷ್ಯನ ಹೃದಯವಿದ್ದಂತೆ ಹಾಗಾಗಿ ಇಂತಹ ಸಮ್ಮೇಳನಗಳು ಪ್ರತಿ ಹಳ್ಳಿ, ಗ್ರಾ.ಪಂ. ವ್ಯಾಪ್ತಿಗಳಲ್ಲಿಯೂ ನಡೆಯುವಂತೆ ಸಾಹಿತ್ಯ ಪರಿಷತ್ ಕ್ರಮ ಕೈಗೊಂಡಲ್ಲಿ, ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದರು.
ಪ್ರಗತಿ ಮತ್ತು ಪ್ರಕೃತಿ ಎರಡರ ಸಮತೋಲನ ಅಗತ್ಯವಿದೆ. ಎಗ್ಗಿರದ ಪ್ರಗತಿಗೆ ಹವಣಿಸಿದರೆ ಪ್ರಕೃತಿ ತನ್ನ ಅನಿರೀಕ್ಷಿತ ವಿಕೋಪದ ಮೂಲಕ ಅದನ್ನು ಹದ್ದುಬಸ್ತಿಗೆ ತರುವುದು ಎಂಬ ಚಿಂತಕ ಮಾಲ್ಥಸ್ ವಾದ ಒಪ್ಪುವಂತದ್ದು, ವಿಜ್ಞಾನ, ತಂತ್ರಜ್ಞಾನದ ಪ್ರಗತಿಗೂ ಇತಿ, ಮಿತಿಗಳಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜೀವಪರವಾದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಮೌಲ್ಯಗಳಿಲದ ಪ್ರಗತಿ, ವಿರುದ್ಧವಾದ ದಿಕ್ಕಿನಲ್ಲಿ ನಮ್ಮನ್ನು ತೆಗೆದುಕೊಂಡು ಹೋಗಲಿದೆ ಎಂಬ ಎಚ್ಚರಿಕೆಯನ್ನು ನಾವೆಲ್ಲರೂ ಮನಗಾಣ ಬೇಕಾಗಿದೆ ಎಂದು ತಿಳಿಸಿದರು.
ನಾನು ತುಮಕೂರಿನಲ್ಲಿ ಹುಟ್ಟಿ, ಬೆಳೆದವನಲ್ಲ. ನಮ್ಮ ಪೂರ್ವಜರು ಗುಬ್ಬಿ, ತುಮಕೂರು ಮೂಲದಿಂದ ಬೆಂಗಳೂರಿನಲ್ಲಿ ನೆಲೆಸಿದವರು. ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾಗ ನಾನು ಕಲಿಸಿದ್ದಕ್ಕಿಂತ, ವಿದ್ಯಾರ್ಥಿ ಮಿತ್ರರಿಂದ ಕಲಿತಿದ್ದೇ ಹೆಚ್ಚು. ವಿಶ್ವ ಸಂಸ್ಕೃತಿ ತುಮಕೂರು ಜಿಲ್ಲೆ ನೀಡಿದ ಕೊಡುಗೆ ಅಪಾರ. ಇಂಗ್ಲಿಷ್ ಕಲಿಕೆಯ ಜೊತೆಗೆ, ನಮ್ಮ ಕನ್ನಡ ಉಳಿಸುವ ಛಲ ನಮಗೆ ಬೇಕಿದೆ. ಕನ್ನಡ ಅಳಿಯದಂತೆ ನೋಡಿಕೊಳ್ಳುವ ಶೈಕ್ಷಣಿಕ ಮತ್ತು ಶಾಸನಾತ್ಮಕ ಪ್ರಯತ್ನಗಳನ್ನು ನಿರಂತರವಾಗಿ ನಡೆಸಬೇಕಾಗಿದೆ. ಸಾಮೂಹಿಕವಾಗಿ ನಮ್ಮತನವನ್ನು ಕಳೆದುಕೊಳ್ಳದೆ, ವಿಕಾಸ ಹೊಂದುವ ಸಂಕಲ್ಪಶಕ್ತಿಯನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಡಾ.ಎಚ್.ಎಸ್. ಶಿವಪ್ರಕಾಶ್ ತಿಳಿಸಿದರು.ಸಮ್ಮೇಳನದ ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಕಸಾಪ ನಿರಂತರ ಚಟವಟಿಕೆಯಲ್ಲಿ ತೊಡಗಿದೆ. ಈ ವರ್ಷ ನಾಲ್ಕು ಸಮ್ಮೇಳನ ನಡೆಸುವ ಗುರಿ ಹೊಂದಿದ್ದು, ಈಗಾಗಲೇ ತುರುವೇಕೆರೆ ಮತ್ತು ಶಿರಾ ಸಮ್ಮೇಳನ ನಡೆದಿವೆ. ಜನವರಿಯಲ್ಲಿ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕು ಸಮ್ಮೇಳನ ನಡೆಯಲಿವೆ. ಇಂದಿನ ಸಮ್ಮೇಳನದಲ್ಲಿ ೧೫೦೦ ಶಿಕ್ಷಕರು, ೧೦೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಗೋಷ್ಠಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಹದಿನಾಲ್ಕನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಎಂ.ವಿ. ನಾಗರಾಜರಾವ್, ನೂತನ ಸಮ್ಮೇಳಾನಾಧ್ಯಕ್ಷರಿಗೆ ಕನ್ನಡ ದ್ವಜ ಹಸ್ತಾಂತರಿಸಿದರು. ಸಮ್ಮೇಳನದ ಸಾನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಜೀ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಬಿ.ಜೋತಿಗಣೇಶ್ ವಹಿಸಿದ್ದರು. ಸಮ್ಮೇಳನಾಧ್ಯಕ್ಷರ ಮುಗಿಲ ಜಹಜು ಕೃತಿ ಬಿಡುಗಡೆ ಮಾಡಿ ಡಾ.ಎಂ.ಎಸ್. ಅಶಾದೇವಿ ಮಾತನಾಡಿದರು.
ವೇದಿಕೆಯಲ್ಲಿ ಎಡಿಸಿ ಶಿವಾನಂದ ಬಿ.ಕರಾಳೆ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮೆರವಣಿಗೆ ಸಮಿತಿ ಅಧ್ಯಕ್ಷ ಡಾ.ವೈ.ಕೆ. ಬಾಲಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಕಸಾಪ ಪದಾಧಿಕಾರಿಗಳಾದ ಡಾ.ಡಿ.ಎನ್. ಯೋಗೀಶ್ವರಪ್ಪ, ಉಮಾಮಹೇಶ್, ಡಾ. ಸಣ್ಣಹೊನ್ನಯ್ಯ ಕಂಟಲಗೆರೆ, ಎಸ್. ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್......ಕಣ್ಮನ ಸೆಳೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಹದಿನೈದನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಹೆಚ್.ಎಸ್.ಶಿವಪ್ರಕಾಶ್ ಅವರ ಆಶಯದಂತೆ ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರ ಇರಿಸಿ,ದೊಳ್ಳು, ವೀರಗಾಸೆ, ಕರಡಿ ಮಜಲು, ನಾಸಿಕ್ ಡೋಲು,ನಂದಿ ದ್ವಜ,ಸೋಮನಕುಣಿತ, ನಾದಸ್ವರ, ಗಾರುಡಿ ಗೊಂಬೆ, ಕೋಳಿ ನೃತ್ಯದಂತಹ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಟೌನ್‌ಹಾಲ್‌ನಿಂದ ಎಂ.ಜಿ.ರಸ್ತೆ,ಗುಂಚಿ ಸರ್ಕಲ್, ಡಾಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಗಾಜಿನಮನೆ ತಲುಪಿತು.
ಪೋಟೊ1. ನಗರದ ಗಾಜಿನ ಮನೆಯಲ್ಲಿ ನಡೆದ 5 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಖ್ಯಾತ ಕವಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ಶಿವಪ್ರಕಾಶ್ ಸೇರಿದಂತೆ ಇನ್ನಿತರೆ ಗಣ್ಯರು ಇದ್ದರು.
2. ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿದರು.