ನಕಲಿ ವೈದ್ಯರು ಸ್ವಪ್ರೇರಣೆಯಿಂದ ಕ್ಲಿನಿಕ್‌ ಮುಚ್ಚಲಿ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಯಾವುದೇ ಅರ್ಹತೆ ಇಲ್ಲದೇ ದುಡಿಮೆಗೋಸ್ಕರ ಕೆಲವರು ಬಡವರ ಪ್ರಾಣಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ನಿಷೇಧಿತ ಸ್ಟಿರಾಯ್ಡ್‌ನಂತಹ ಔಷಧಿ ನೀಡಿ ಚಿಕಿತ್ಸೆ ನೀಡುತ್ತಿರುವ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿದೆ

ಹೂವಿನಹಡಗಲಿ: ರಾಜ್ಯದಲ್ಲಿ ನಕಲಿ ವೈದ್ಯರ ಹಾ‍ವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಸುತ್ತೋಲೆ ಹೊರಡಿಸಿದೆ. ವೈದ್ಯಕೀಯ ಶಿಕ್ಷ ಣ ಪಡೆಯದೇ ವೃತ್ತಿ ಮಾಡುವವರು ಸ್ವಯಂಪ್ರೇರಣೆಯಿಂದ ತಮ್ಮ ಕ್ಲಿನಿಕ್‌ಗಳನ್ನು ಮುಚ್ಚಬೇಕಿದೆ ಎಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಆರೋಗ್ಯಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಅರ್ಹತೆ ಇಲ್ಲದೇ ದುಡಿಮೆಗೋಸ್ಕರ ಕೆಲವರು ಬಡವರ ಪ್ರಾಣಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ನಿಷೇಧಿತ ಸ್ಟಿರಾಯ್ಡ್‌ನಂತಹ ಔಷಧಿ ನೀಡಿ ಚಿಕಿತ್ಸೆ ನೀಡುತ್ತಿರುವ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿದೆ ಎಂದರು.

ತಾಲೂಕಿನಲ್ಲಿ ನಕಲಿ ವೈದ್ಯರ ಪಟ್ಟಿಯನ್ನು ಆರೋಗ್ಯ ಇಲಾಖೆಯಿಂದ ಸಿದ್ಧವಾಗಿದೆ. ಅಧಿಕಾರಿಗಳು ನಕಲಿ ವೈದ್ಯರ ವಿರುದ್ಧ ದಾಳಿ ನಡೆಸುವ ಮುನ್ನ ಅವರು ತಮ್ಮ ವೃತ್ತಿಯಿಂದ ಹಿಂದೆ ಸರಿಯಬೇಕಿದೆ. ಇಲ್ಲದಿದ್ದರೆ ಸರ್ಕಾರದ ನಿಯಮಾವಳಿಯಂತೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ರೂಪಾಂತರಿ ತಳಿಯ ಬಗ್ಗೆ ಅನಗತ್ಯವಾಗಿ ಸಾರ್ವಜನಿಕರು ಭಯ ಪಡದೇ ಜಾಗರೂಕತೆಯಿಂದ ಇರಬೇಕಿದೆ. ಕೋವಿಡ್ ಲಕ್ಷಣಗಳು ಕಾಣಿಸಿದರೆ ಆಸ್ಪತ್ರೆಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ತಾಲೂಕು ಆಡಳಿತ ಕೋವಿಡ್ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಸ್ವಪ್ನಾ ಕಟ್ಟಿ ಮಾತನಾಡಿ, ತಾಲೂಕಿನಲ್ಲಿ ಒಂದು ಕೋವಿಡ್ ಪ್ರಕರಣ ಪತ್ತೆಯಾಗಿದೆ. ಕೋವಿಡ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಆಕ್ಸಿಜನ್ ಹಾಸಿಗೆ, ಇಟ್ಟಿಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಆಕ್ಸಿಜನ್ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಜತೆಗೆ ಕೋವಿಡ್‌ಗೆ ನೀಡಬೇಕಾದ ಔಷಧಿ ಕಿಟ್‌ಗಳು ಸೇರಿದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ. ಆದ್ದರಿಂದ ಜನ ಆತಂಕಪಡದೆ ಸೋಂಕಿನ ಲಕ್ಷಣಗಳು ಕಾಣಿಸಿದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಟಿ.ವಿ. ಪ್ರಕಾಶ್, ತಹಸೀಲ್ದಾರ್ ಕೆ. ಶರಣಮ್ಮ, ತಾಪಂ ಇಒ ಜಯರಾಮ ಚವ್ಹಾಣ್ ಸೇರಿದಂತೆ ಇತರರಿದ್ದರು.

Share this article