ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಎಷ್ಟು ಕೊಟ್ಟಿದೆಯೋ ಗೊತ್ತಿಲ್ಲ. ಆದರೆ, ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಬರ ಪರಿಸ್ಥಿತಿಯನ್ನೂ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.
ಮಳೆ ಇಲ್ಲದ್ದಕ್ಕೆ ರೈತರಿಗೆ ಮೇವಿನಕೊರತೆ ಎದುರಾಗಿದೆ. ಜಾನುವಾರುಗಳಿಗೆ ಹಸಿ, ಒಣ ಮೇವು ಒದಗಿಸುವ ಜತೆಗೆ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು. ಜಾನುವಾರ ಸಾಕಣೆ ಕೇಂದ್ರ ಸ್ಥಾಪಿಸಬೇಕು. ಆದರೆ, ಇವುಗಳನ್ನು ತೆರೆಯುವ ಲಕ್ಷಣಗಳೇ ಕಾಣುತ್ತಿಲ್ಲ. ಬರ ನಿರ್ವಹಣೆಗೆ ಜಿಲ್ಲಾಧಿಕಾರಿ ಬಳಿಯೂ ಹಣವಿಲ್ಲ. ಇನ್ನು ಮೇಲಾದರೂ ಬರದಿಂದ ಕೆಂಗಟ್ಟಿರುವ ರೈತ ಸಮುದಾಯಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.ತಮ್ಮ ಮಾತಿನುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ಹೊರೆ ಮಾಡಿದ್ದರೂ, ಹೈನುಗಾರರಿಗೆ ಕಳೆದ ಏಳು ತಿಂಗಳಿನಿಂದ ಪ್ರೋತ್ಸಾಹಧನ ನೀಡಿಲ್ಲ. ₹10 ಬಾಂಡ್ ಪೇಪರ್ ಅನ್ನು ₹100ಕ್ಕೆ ಏರಿಸಲಾಗಿದೆ. ₹100 ಇದ್ದ ಬಾಂಡ್ ಪೇಪರ್ ಅನ್ನು ₹500 ಹೆಚ್ಚಳ ಮಾಡಿದ್ದಾರೆ. ಆಸ್ತಿ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಿದ್ದಾರೆ. ₹4.75 ಇದ್ದ ಒಂದು ಯುನಿಟ್ ವಿದ್ಯುತ್‌ನ್ನು ₹7.25ಕ್ಕೆ ಏರಿಸಿದ್ದಾರೆ. ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಮಾಡಿಲ್ಲ. ನೀರಾವರಿ ಪೈಪಿನ ಸಬ್ಸಿಡಿ ತೆಗೆದು ಹಾಕಿ ರೈತರ ಮರಣ ಶಾಸನ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡುವ, 370ನೇ ವಿಧಿ ರದ್ದುಗೊಳ್ಳಿಸುತ್ತೇವೆ ಎನ್ನುವ ಕಾಂಗ್ರೆಸ್ ಪ್ರಣಾಳಿಕೆಯೇ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ತಯಾರಿಸಿದ ಮುಸ್ಲಿಂ ಲೀಗ್ ಪ್ರಣಾಳಿಕೆ ಇದ್ದಂತಿದೆ. ಇನ್ನು ಸಂಪತ್ತಿನ ಮರು ಹಂಚಿಕೆ ನಕ್ಸಲ್‌ವಾದದ ಮಾನಸಿಕತೆ ಇದ್ದಂತಿದೆ ಎಂದ ಹೇಳಿದರು.
ನೇಹಾ ತಂದೆ ನಿರಂಜನ ಹಿರೇಮಠ ಅವರು ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದ್ದಾರಲ್ಲ ಎಂದು ಪ್ರಶ್ನೆಗೆ, ನೇಹಾ ಹತ್ಯೆ ಆದ ದಿನ ನಮ್ಮ ಸರ್ಕಾರದಿಂದ ನ್ಯಾಯ ಸಿಗಲ್ಲ, ನೀವೆ ನಮಗೆ ನ್ಯಾಯ ಕೊಡಿಸಬೇಕು ಎಂದು ನಿರಂಜನ ಅವರೇ ಕಿಮ್ಸ್‌ನಲ್ಲಿ ನನ್ನ ಬಳಿ ಹೇಳಿದ್ದರು. ಈಗ ಅವರಿಗೆ ಯಾವ ಭರವಸೆ ಸಿಕ್ಕಿದೆಯೋ ಗೊತ್ತಿಲ್ಲ ಎಂದು ಜೋಶಿ ಹೇಳಿದರು.ದಿಂಗಾಲೇಶ್ವರರ ಹಿಂದೆ ಕಾಂಗ್ರೆಸ್?
ಆಗ ಶಾಸಕ ಮಹೇಶ ಟೆಂಗಿನಕಾಯಿ ಅವರು, ನವಲಗುಂದದಲ್ಲಿ ಶ್ರೀಗಳು ನಡೆಸಿದ ಸಭೆಗೆ ಕಾಂಗ್ರೆಸ್ಸಿನವರೇ ಪರವಾನಗಿ ತೆಗೆದುಕೊಂಡಿರುವ ಪತ್ರವನ್ನು ತೋರಿಸಿದರಲ್ಲದೇ, ಇದರಿಂದ ಶ್ರೀಗಳ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಧ್ವನಿಗೂಡಿಸಿದ ಜೋಶಿ ಅವರು ಸಹ ಅಮರಗೋಳದ ಸಭೆಗೂ ಕಾಂಗ್ರೆಸ್ಸಿನವರೇ ಅನುಮತಿ ಪಡೆದಿದ್ದಾರೆ ಎಂದು ಹೇಳಿದರು.