ಕುಷ್ಟಗಿಯಲ್ಲಿ ಕುಡಿಯುವ ನೀರು, ಮೇವು ಸಮಸ್ಯೆ ನೀಗಿಸಲು ತಂಡ ರಚನೆ

KannadaprabhaNewsNetwork |  
Published : Mar 08, 2024, 01:55 AM IST
ಪೋಟೊ7ಕೆಎಸಟಿ3: ಕುಷ್ಟಗಿ ಪಟ್ಟಣದ ಮಿನಿ ವಿಧಾನಸೌಧದ ಹೊರನೋಟ. | Kannada Prabha

ಸಾರಾಂಶ

ತಾಲೂಕಿನಲ್ಲಿ ಪ್ರತಿ ಮಂಗಳವಾರ ಮತ್ತು ಬುಧವಾರ ಗ್ರಾಮ ಮಟ್ಟದ ಕಾರ್ಯಪಡೆ ಮತ್ತು ಪ್ರತಿ ಗುರುವಾರ ತಾಲೂಕು ಮಟ್ಟದ ಕಾರ್ಯಪಡೆ ಸಭೆ ನಡೆಯತ್ತದೆ.

ಕುಷ್ಟಗಿ: ಈ ಬಾರಿ ಬರಗಾಲ ಎದುರಾಗಿರುವುದರಿಂದ ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಈ ಎರಡು ಸಮಸ್ಯೆಗಳನ್ನು ಎದುರಿಸಲು ತಾಲೂಕಾಡಳಿತ ತಂಡಗಳನ್ನು ರಚನೆ ಮಾಡಿಕೊಂಡು ಸನ್ನದ್ಧವಾಗಿದೆ.

ತಾಲೂಕಿನಲ್ಲಿ ಪ್ರತಿ ಮಂಗಳವಾರ ಮತ್ತು ಬುಧವಾರ ಗ್ರಾಮ ಮಟ್ಟದ ಕಾರ್ಯಪಡೆ ಮತ್ತು ಪ್ರತಿ ಗುರುವಾರ ತಾಲೂಕು ಮಟ್ಟದ ಕಾರ್ಯಪಡೆ ಸಭೆ ನಡೆಯತ್ತದೆ. ಜಿಲ್ಲಾ ಮಟ್ಟದಲ್ಲಿ ಪ್ರತಿ ಶುಕ್ರವಾರ (ವಿಡಿಯೋ ಸಭೆ) ನಡೆಯುತ್ತದೆ. ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಪಶು ಸಖಿ, ಕೃಷಿ ಸಖಿ ಮತ್ತು ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಸಭೆಯಲ್ಲಿನ ನಡಾವಳಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ.

ತಾಲೂಕಿನ 36 ಗ್ರಾಪಂಗಳ ಪೈಕಿ 173 ಗ್ರಾಮಗಳು ಬರುತ್ತಿದ್ದು, ಈ ಗ್ರಾಮಗಳಿಗೆ ಡಿಬಿಒಟಿ ಹಾಗೂ ಎಂವಿಎಸ್‌ ಯೋಜನೆ ಮೂಲಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪ್ರಸಕ್ತವಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ 4 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು ಎಂದು ಅಂದಾಜಿಸಲಾಗಿದೆ.

ನೀರಿಗಾಗಿ ₹50 ಲಕ್ಷ: ತಾಲೂಕಿನಲ್ಲಿ ಒಟ್ಟು 473 ಸರ್ಕಾರಿ ಮತ್ತು 4206 ಖಾಸಗಿ ಬೋರ್‌ವೆಲ್‌ಗಳಿದ್ದು, ಅದರಲ್ಲಿ 315 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ. ಈ ಖಾಸಗಿ ಬೋರ್‌ವೆಲ್‌ಗಳ ಮಾಲೀಕರಿಂದ ಕರಾರು ಪತ್ರ ಮಾಡಿಸಿಕೊಳ್ಳಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಅತಿಯಾಗಿ ಕುಡಿಯುವ ನೀರಿನ ಸಮಸ್ಯೆಯಾದರೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿಕೊಳ್ಳಲು ತಹಸೀಲ್ದಾರರ ಪಿಡಿ ಖಾತೆಯಲ್ಲಿ ತಲಾ ₹50 ಲಕ್ಷ ಕಾಯ್ದಿರಿಸಲಾಗಿದೆ.

ಮೇವು ಬ್ಯಾಂಕ್: ತಾಲೂಕಿನಲ್ಲಿ ಇನ್ನೂ 83193.99 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, 22 ವಾರಕ್ಕೆ ಸಾಕಾಗುವಷ್ಟು ಮೇವು ಲಭ್ಯವಿದೆ. ಮೇವಿನ ಸಮಸ್ಯೆ ಉಂಟಾದರೆ ಮೇವಿನ ಬ್ಯಾಂಕ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಮೇವಿನ ಕಿಟ್ ನೀಡಲು ಸರ್ಕಾರದಿಂದ 5578 ಮಿನಿ ಕಿಟ್‌ಗಳು ಸರಬರಾಜು ಆಗಿದ್ದು, ಅದರಲ್ಲಿ 4881 ಕಿಟ್‌ಗಳನ್ನು ಅವಶ್ಯವಿರುವ ರೈತರಿಗೆ ನೀಡಲಾಗಿದೆ.

ಹಾನಿ: ತಾಲೂಕಿನಲ್ಲಿ ಶೇ. 30 ಮಳೆ ಕೊರತೆಯಾಗಿದೆ. 3,13,795 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ತೇವಾಂಶದ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ನೀರಾವರಿ ಬೆಳೆಗಳು ಹೊರತುಪಡಿಸಿ 72,664 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿದೆ. ₹148.71 ಕೋಟಿ ಬೆಳೆ ಪರಿಹಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮಧ್ಯಂತರ ಪರಿಹಾರ: ರಾಜ್ಯ ಸರ್ಕಾರದಿಂದ ರೈತರಿಗೆ ಆಗಿರುವ ನಷ್ಟಕ್ಕೆ ₹2000ದಂತೆ ಮಧ್ಯಂತರ ಪರಿಹಾರ ನೀಡುತ್ತಿದ್ದು, ಇದುವರೆಗೆ 34,274 ರೈತರಿಗೆ ₹6.77 ಕೋಟಿ ಪರಿಹಾರವನ್ನು ಹಂತ ಹಂತವಾಗಿ ಡಿಬಿಟಿ ಮೂಲಕ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ.

ಸಹಾಯವಾಣಿ ಆರಂಭ: ತಾಲೂಕು ಕಚೇರಿ 9845791349, ಉಪತಹಸೀಲ್ದಾರ್‌ ಕಚೇರಿ, ಹನುಮಸಾಗರ 7022633116, ಉಪತಹಸೀಲ್ದಾರ್‌ ಕಚೇರಿ ಹನುಮನಾಳ 7259995531, ಉಪ ತಹಸೀಲ್ದಾರ್‌ ಕಚೇರಿ, ತಾವರಗೇರಾ 9448982759 ತಾಲೂಕಿನ ಜನತೆಗೆ ಕುಡಿಯುವ ನೀರು ಮೇವಿನ ಕೊರತೆ ಸೇರಿದಂತೆ ತೊಂದರೆಗಳು ಕಂಡುಬಂದರೆ ಈ ಸಹಾಯವಾಣಿಗೆ ಸಂಪರ್ಕಿಸಿ ದೂರುಗಳನ್ನು ಸಲ್ಲಿಸಬಹುದಾಗಿದೆ.

ಬೇಸಿಗೆಯ ಹಿನ್ನೆಲೆಯಲ್ಲಿ ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ತೊಂದರೆಯಾಗದಂತೆ ತಾಲೂಕಾಡಳಿತದಿಂದ ಮುಂಜಾಗ್ರತೆಯಾಗಿ ಎಲ್ಲ ರೀತಿಯ ಕ್ರಮವನ್ನು ಕೈಗೊಂಡಿದ್ದು, ಬೇಸಿಗೆಯನ್ನು ಎದುರಿಸಲು ಸನ್ನದ್ಧವಾಗಿದೆ ಎನ್ನುತ್ತಾರೆ ತಹಸೀಲ್ದಾರ ರವಿ ಅಂಗಡಿ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ