ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಕಡ್ಡಾಯ

KannadaprabhaNewsNetwork |  
Published : Mar 03, 2024, 01:35 AM IST
ಸಿಕೆಬಿ-5 ಶಾಲಾ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆಯ ಕಾನೂನು ಅರಿವು ಕಾರ್ಯಾಗಾರವನ್ನು ನ್ಯಾ.ನೇರಳೆ ವೀರಭದ್ರಯ್ಯ ಭವಾನಿ ಉದ್ಘಾಟಿಸಿದರು | Kannada Prabha

ಸಾರಾಂಶ

ಮನೆಯಿಂದ ಸುರಕ್ಷಿತವಾಗಿ ಶಾಲೆಗೆ ಹೋದ ಮಕ್ಕಳು ಶಾಲೆಯಿಂದಲೂ ಅಷ್ಟೇ ಸುರಕ್ಷಿತವಾಗಿ ಬರಬೇಕು. ಮಕ್ಕಳು ಶಾಲೆಯಲ್ಲಿರುವ ಅವಧಿಯಲ್ಲಿ ಅವರಿಗೆ ಏನೇ ತೊಂದರೆ ಅಥವಾ ಸಮಸ್ಯೆಯಾದರೂ ಅವರು ಶಾಲೆಯಲ್ಲಿ ಮುಕ್ತವಾಗಿ ಹೇಳಿಕೊಳ್ಳುವಂತಿರಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಾಲಾ ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ದೃಷ್ಟಿಯಿಂದ ಸರ್ಕಾರದ ಆದೇಶದಂತೆ ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಶನಿವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಪಂಚಾಯಿತಿ ಮತ್ತು ಶಾಲಾ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆಯ ಬಗ್ಗೆ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ರಚನೆಗೆ ಶಾಲೆಗಳ ನಿರ್ಲಕ್ಷ

ಮನೆಯಿಂದ ಸುರಕ್ಷಿತವಾಗಿ ಶಾಲೆಗೆ ಹೋದ ಮಕ್ಕಳು ಶಾಲೆಯಿಂದಲೂ ಅಷ್ಟೇ ಸುರಕ್ಷಿತವಾಗಿ ಬರಬೇಕು. ಮಕ್ಕಳು ಶಾಲೆಯಲ್ಲಿರುವ ಅವಧಿಯಲ್ಲಿ ಅವರಿಗೆ ಏನೇ ತೊಂದರೆ ಅಥವಾ ಸಮಸ್ಯೆಯಾದರೂ ಅವರು ಶಾಲೆಯಲ್ಲಿ ಮುಕ್ತವಾಗಿ ಹೇಳಿಕೊಳ್ಳುವಂತಿರಬೇಕು. ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಶಾಲೆಗಳಲ್ಲಿಯೂ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸುವಂತೆ 1990 ರಲ್ಲಿಯೇ ಸುತ್ತೋಲೆ ಹೊರಡಿಸಿದೆ. ಆದರೆ, ಸರ್ಕಾರದ ಆದೇಶವನ್ನು ಶಾಲೆಗಳು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಕ್ಕಳು ತಮಗೆ ಆದ ತೊಂದರೆಯನ್ನು ಯಾರೊಂದಿಗೆ ಹೇಳಿಕೊಳ್ಳಬೇಕು. ಮಕ್ಕಳು ಮುಕ್ತ ಮತ್ತು ನಿರ್ಭಯ ವಾತಾವರಣದಲ್ಲಿ ಅತ್ಯಂತ ಸುರಕ್ಷಿತವಾಗಿ ಇರಬೇಕು. ಆದ್ದರಿಂದ ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಕಡ್ಡಾಯವಾಗಿ ಮತ್ತು ಆದ್ಯತೆಯ ಮೇಲೆ ರಚಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ದೌರ್ಜನ್ಯ ತಡೆಯಲು ಸಮಿತಿ

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿಗಳು ರಚನೆಯಾಗಬೇಕು. ಈ ಸಮಿತಿಗಳ ರಚನೆ ಕುರಿತು ಪಂಚಾಯಿತಿಗಳು, ಶಿಕ್ಷಕರಿಗೇ ಮಾಹಿತಿ ಇಲ್ಲ. ಮಕ್ಕಳ ಮೇಲೆ ಯಾರಿಂದಲೂ ಯಾವುದೇ ರೀತಿಯ ದೌರ್ಜನ್ಯಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ತಡೆಯುವುದೇ ಸಮಿತಿಗಳ ಮುಖ್ಯ ಧ್ಯೇಯವಾಗಿದೆ. ಮಕ್ಕಳ ರಕ್ಷಣೆ ಕೆಲಸ ಪರಿಣಾಮಕಾರಿಯಾಗಿ ಆಗುವ ಅಗತ್ಯವಿದೆ ಎಂದರು.

ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯಬಾರದು. ಒಂದು ವೇಳೆ ನಡೆದರೆ ಅದಕ್ಕೆ ಕಾನೂನಿನ ನೆರವನ್ನೂ ಪಡೆದುಕೊಂಡು ಮಕ್ಕಳನ್ನು ರಕ್ಷಿಸಬೇಕಿದೆ. ಎಲ್ಲಿಯೇ ಆಗಲಿ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುತ್ತಿದ್ದರೆ, ಶೋಷಣೆ ಆಗುತ್ತಿದ್ದರೆ ಗಮನಿಸಿದವರು ಮಕ್ಕಳ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿ ತೋರಬೇಕು ಎಂದರು.ಸಾಮಾಜಿಕಜಾಲ ತಾಣ ಬಳಕೆ

ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ನಡೆಯುತ್ತಿದೆ. ಪೋಸ್ಟರ್,ವಿಡಿಯೊ ಮತ್ತು ಕಿರುಚಿತ್ರಗಳ ಮುಖಾಂತರ ಮಕ್ಕಳ ಹಕ್ಕುಗಳ ರಕ್ಷಣೆಯ ವಿಚಾರಗಳಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ ಸಂಖ್ಯೆ 1098 ಅಥವಾ 112 ಸಂಖ್ಯೆಗೆ(24/7) ಕರೆ ಮಾಡಬಹುದು ಎಂದು ಮನವಿ ಮಾಡಿದರು.ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶೆ ಎ.ಅರುಣಕುಮಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸರ್ಕಾರಿ ವಕೀಲರಾದ ಜಯರಾಮರೆಡ್ಡಿ, ಬಿಜಿಎಸ್ ವಿದ್ಯಾ ಸಂಸ್ಥೆಯ ಡಾ.ಮಧುಸೂದನ್, ವಿಕಾಸ್ ರೆಡ್ಡಿ, ಕೆ.ವಿ.ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಶಿವರಾಂ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ
ತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹ