ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಉಪವಿಭಾಗ ರಚನೆ

KannadaprabhaNewsNetwork |  
Published : Aug 23, 2026, 02:15 AM IST
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಉಪವಿಭಾಗದ ನೂತನ ಕಚೇರಿಯಲ್ಲಿ ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಮಟ್ಕಾ, ಜೂಜಾಟ, ಗಾಂಜಾ ಹಾಗೂ ಅಕ್ರಮ ಮದ್ಯ ಮಾರಾಟ ಸೇರಿದಂತೆ ಸಂಘಟಿತ ಅಪರಾಧಗಳ ವಿರುದ್ಧ ಜಿಲ್ಲೆಯಲ್ಲಿ ಪ್ರತಿ ವಾರ 20ರಿಂದ 25 ಪ್ರಕರಣ ದಾಖಲಿಸಲಾಗುತ್ತಿದೆ.

ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲಿ ಗ್ರಾಮೀಣ ಪೊಲೀಸ್‌ ಉಪವಿಭಾಗ ಹೊಸದಾಗಿ ರಚಿಸಿದ್ದು ಈ ಮೂಲಕ ಜಿಲ್ಲೆಯಲ್ಲಿ ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಎರಡು ಪೊಲೀಸ್ ಉಪವಿಭಾಗಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.

ಇಲ್ಲಿನ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ನೂತನ ಕಚೇರಿ ಉದ್ಘಾಟಿಸಿ, ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ಶಿವಾನಂದ ಕಟಗಿ ಅವರಿಗೆ ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ಹಾಗೂ ಗುಡಗೇರಿ ಠಾಣೆಗಳು ಹೊಸ ಉಪವಿಭಾಗದ ವ್ಯಾಪ್ತಿಗೆ ಬರಲಿವೆ. ಧಾರವಾಡ ಗ್ರಾಮೀಣ ಉಪವಿಭಾಗದಲ್ಲಿ ಕಲಘಟಗಿ, ಧಾರವಾಡ ಗ್ರಾಮೀಣ ಹಾಗೂ ಗರಗ ಠಾಣೆಗಳು ಮುಂದುವರಿಯಲಿವೆ. ಆಡಳಿತ ವಿಕೇಂದ್ರೀಕರಣದಿಂದ ಜನರಿಗೆ ಶೀಘ್ರ ಪೊಲೀಸ್ ಸೇವೆ ದೊರೆಯಲಿದೆ. ಗುಡಗೇರಿ ಭಾಗದ ಜನರು ಇನ್ನು ಧಾರವಾಡಕ್ಕೆ ತೆರಳುವ ಬದಲು ಹುಬ್ಬಳ್ಳಿ ಉಪವಿಭಾಗ ಕಚೇರಿಗೆ ಬಂದು ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದರು.

ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಮಟ್ಕಾ, ಜೂಜಾಟ, ಗಾಂಜಾ ಹಾಗೂ ಅಕ್ರಮ ಮದ್ಯ ಮಾರಾಟ ಸೇರಿದಂತೆ ಸಂಘಟಿತ ಅಪರಾಧಗಳ ವಿರುದ್ಧ ಜಿಲ್ಲೆಯಲ್ಲಿ ಪ್ರತಿ ವಾರ 20ರಿಂದ 25 ಪ್ರಕರಣ ದಾಖಲಿಸಲಾಗುತ್ತಿದೆ. ಯಾವುದೇ ಅಕ್ರಮ ಚಟುವಟಿಕೆ ಕುರಿತು ಮಾಹಿತಿ ದೊರೆತರೆ ಕೂಡಲೇ ದಾಳಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅಗತ್ಯ ಬಂದೋಬಸ್ತ್‌:

ಆ. 26ರಂದು ನಡೆಯಲಿರುವ ಈದ್ ಮಿಲಾದ್ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ವಿವಿಧ ತಾಲೂಕು ಹಾಗೂ ಠಾಣೆಗಳ ಮುಖಂಡರು ಡಿಜೆ ಬಳಸುವುದಿಲ್ಲ ಎಂದು ಪೊಲೀಸರಿಗೆ ಭರವಸೆ ನೀಡಿದ್ದಾರೆ. ಈದ್ ಮಿಲಾದ್ ಬಂದೋಬಸ್ತ್‌ಗೆ ಎರಡು ಕೆಎಸ್‌ಆರ್‌ಪಿ ತುಕಡಿಗಳು ಹೆಚ್ಚುವರಿಯಾಗಿ ಬರಲಿವೆ ಎಂದರು.

ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಗಣೇಶೋತ್ಸವ ಆಯೋಜಕರು ಸಿಂಗಲ್ ವಿಂಡೋ ವ್ಯವಸ್ಥೆ ಮೂಲಕ ಅಗತ್ಯ ಅನುಮತಿ ಪಡೆಯಬೇಕು. ಸುಪ್ರೀಂಕೋರ್ಟ್ ಆದೇಶ ಹಾಗೂ ನಿಯಮಾವಳಿಗಳ ಪ್ರಕಾರ ರಾತ್ರಿ 10ರ ವರೆಗೆ ಡಿಜೆ ಬಳಕೆಗೆ ಅನುಮತಿ ನೀಡಲಾಗುವುದು ಎಂದರು.

ಈ ವೇಳೆ ಡಿವೈಎಸ್‌ಪಿ ಶಿವಾನಂದ ಕಟಗಿ, ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್‌ ಮುರಗೇಶ ಚೆನ್ನಣ್ಣವರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಡರಗಿ: ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ ಪತ್ತೆ, 160 ವಿದ್ಯಾರ್ಥಿಗಳು ಅಸ್ವಸ್ಥ
ದೇಗುಲಗಳು ಶಾಂತಿ, ನೆಮ್ಮದಿ ನೀಡುವ ಪವಿತ್ರ ಕೇಂದ್ರಗಳು: ಫಕೀರ ಸಿದ್ಧರಾಮ ಸ್ವಾಮೀಜಿ