ಜಿಲ್ಲಾ ಕೌಶಲ್ಯ ಮಿಷನ್‍ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬರುವ ಮಾರ್ಚ್ 01ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಬೃಹತ್ ಉದ್ಯೋಗ ಮೇಳ ಯಶಸ್ಸಿಗೆ ಏಳು ಉಪ ಸಮಿತಿಗಳ ರಚಿಸಲಾಗಿದ್ದು ಉದ್ಯೋಗ ಮೇಳವನ್ನು ಶಿಸ್ತುಬದ್ಧವಾಗಿ ಆಯೋಜಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಕೌಶಲ್ಯ ಮಿಷನ್‍ನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ಸೃಜಿಸಲು ಕ್ರಮವಹಿಸಬೇಕು ಎಂದು ಹೇಳಿದರು.
ಉದ್ಯೋಗ ಮೇಳವನ್ನು ಪರಿಣಾಮಕಾರಿಯಾಗಿ ಆಯೋಜಿಸಲು ರಚಿಸಲಾದ 7 ಉಪಸಮಿತಿಗಳು ತಮ್ಮ ಹಂತದಲ್ಲಿಯೇ ಪ್ರತ್ಯೇಕ ಸಭೆ ನಡೆಸಿ, ವಹಿಸುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ತರಹದ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಭಾಗವಹಿಸುವ ಪ್ರತಿಷ್ಠಿತ ಕಂಪನಿಗಳಿಗೆ, ಕಂಪನಿಗಳ ಪ್ರತಿನಿಧಿಗಳಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಕುಡಿವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ ಮಾತನಾಡಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗವು 2022-23ನೇ ಸಾಲಿನಲ್ಲಿ ಸಿಎಂಕೆಕೆವೈ ಯೋಜನೆಯಡಿ ಸ್ವಯಂ ಉದ್ಯೋಗ ಟೈಲರ್‌ನ ಜಾಬ್‍ರೂಲ್‍ನಲ್ಲಿ ತರಬೇತಿ ಪಡೆದ 149 ಫಲಾನುಭವಿಗಳಿಗೆ 149 ಹೊಲಿಗೆ ಯಂತ್ರ ಹಾಗೂ ಟೂಲ್‍ಕಿಟ್‍ಗಳನ್ನು ಸಂಕಲ್ಪ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ ವಿತರಿಸಲು ಈಗಾಗಲೇ ಸರಬರಾಜು ಮಾಡಿದೆ. ವಿಶ್ವಕರ್ಮ ಯೋಜನೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳನ್ನು ಹೊರತುಪಡಿಸಿದ ಫಲಾನುಭವಿಗಳಿಗೆ ವಿತರಿಸಲು ಸೂಚಿಸಲಾಗಿದೆ.
ತರಬೇತಿ ಪಡೆದ ಫಲಾನುಭವಿಗಳ ದಾಖಲಾತಿ ಸಲ್ಲಿಸಿದ ನಂತರ ವಿತರಿಸಲು ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.ವಿಶ್ವಕರ್ಮ ಯೋಜನೆಯಡಿ 3ನೇ ಹಂತದಲ್ಲಿ ಪರಿಶೀಲಿಸಲಾದ 39,625 ಫಲಾನುಭವಿಗಳಲ್ಲಿ 34,234 ಫಲಾನುಭವಿಗಳಿಗೆ ತರಬೇತಿ ನೀಡಲಾಗಿರುತ್ತದೆ. ಪ್ರಸ್ತುತ ದರ್ಜಿ, ಬಡಗಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವ ಬಗ್ಗೆ ದಿಶಾ ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ ಮತ್ತು ಪ್ರಸ್ತುತ 376 ಫಲಾನುಭವಿಗಳಿಗೆ ತರಬೇತಿ ನೀಡಬೇಕಾಗಿದ್ದು. ನೋಂದಣಿ ಕಾರ್ಯ ಜಿಲ್ಲೆಯಲ್ಲಿ ಕಡಿಮೆ ಇರುತ್ತದೆ. ಪ್ರಸ್ತುತ ವಿಶ್ವಕರ್ಮ ಯೋಜನೆಯ ನಿರ್ವಹಣೆಗೆ ಜಿಲ್ಲಾ ಸಂಯೋಜಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಡೇ-ನಲ್ಮ್ ಯೋಜನೆ, ಪಿಎಂ ಸ್ವ-ನಿಧಿ ಮತ್ತು ಸ್ವ-ನಿಧಿ ಸೇ ಸಮೃದ್ಧಿ ಯೋಜನೆಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.ಇದೇ ಸಂದರ್ಭದಲ್ಲಿ ಉದ್ಯೋಗ ಮೇಳದ ಪೋಸ್ಟರ್ ಗಳನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬಿಡುಗಡೆಗೊಳಿಸಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಡಾ.ವೆಂಕಟೇಶ್ ನಾಯ್ಕ್, ಜಿಪಂ ಯೋಜನಾ ನಿರ್ದೇಶಕಿ ಗಾಯತ್ರಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಆನಂದ್, ಜಂಟಿ ಕೃಷಿನಿರ್ದೇಶಕ ಮಂಜುನಾಥ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.