ತಲಕಾವೇರಿಗೆ ಕೊಡುಗೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

KannadaprabhaNewsNetwork | Published : Dec 11, 2024 12:45 AM

ಸಾರಾಂಶ

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಅವಧಿಯಲ್ಲಿ ಕೊಡಗು ಜಿಲ್ಲೆಯ ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದ ಜೀರ್ಣೋದ್ಧಾರಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಅದಲ್ಲದೆ ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಂಗಳವಾರ ನಿಧನರಾದ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಅವಧಿಯಲ್ಲಿ ಕೊಡಗು ಜಿಲ್ಲೆಯ ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದ ಜೀರ್ಣೋದ್ಧಾರಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಅದಲ್ಲದೆ ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಯ ಮೂವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸಚಿವರನ್ನಾಗಿಸಿ ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯ ನೀಡಿದ್ದರು. ಟಿ. ಜಾನ್ ನಾಗರಿಕ ವಿಮಾನ ಯಾನ, ಎಂ.ಎಂ. ನಾಣಯ್ಯ ಅಬಕಾರಿ ಹಾಗೂ ಸುಮಾ ವಸಂತ್ ಮುಜರಾಯಿ ಸಚಿವರಾಗಿ ಕೆಲಸ ಮಾಡಿದ್ದರು.

ಸಂತಾಪ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಲ್ಲಿ ಎಸ್.ಎಂ.ಕೃಷ್ಣ ಪರಿಶ್ರಮ ಅಪಾರವಾಗಿದ್ದು ಅವರ ಮಹತ್ತರ ಕೊಡುಗೆಯನ್ನು ರಾಜ್ಯ ಮತ್ತು ದೇಶ ಮರೆಯುವಂತಿಲ್ಲ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಧೀಮಂತ ನಾಯಕ, ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಗಲಿಕೆ ಅಪಾರ ನೋವು ತಂದಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರನ್ನು ಸಿಲಿಕಾನ್ ಸಿಟಿಯಾಗಿ ಪರಿವರ್ತನೆ ಮಾಡಿ ಜಾಗತಿಕ ಮಟ್ಟದಲ್ಲಿ ಕರ್ನಾಟಕ ರಾಜ್ಯಕ್ಕೆ ಮಹೋನ್ನತ ಸ್ಥಾನ ಒದಗಿಸುವಲ್ಲಿ ಎಸ್.ಎಂ.ಕೃಷ್ಣ ಪಾತ್ರ ಮಹತ್ತರವಾಗಿದ್ದು, ಎಸ್.ಎಂ.ಕೃಷ್ಣ ಜೀವನ ಮುಂದಿನ ಪೀಳಗೆಗೆ ಮಾದರಿ ಎಂದು ಡಾ. ಮಂತರ್ ಗೌಡ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಎಸ್.ಎಂ.ಕೃಷ್ಣ ನಿಧನಕ್ಕೆ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಚಂದ್ರಕಲಾ, ಕೃಷ್ಣ ಅವರು ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ತಲಕಾವೇರಿ ಅಭಿವೃದ್ಧಿಗೆ ಬಹು ದೊಡ್ಡ ಕೊಡುಗೆ ನೀಡಿದ್ದರು.ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಯ ಮೂವರನ್ನು ತಮ್ಮ ಮಂತ್ರಿಮಂಡಲದಲ್ಲಿ ಮಂತ್ರಿಗಳನ್ನಾಗಿ ಮಾಡಿ ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯ ನೀಡಿದ್ದರು ಎಂದು ಸ್ಮರಿಸಿದ್ದಾರೆ.

Share this article