ಸಮಾಜವಾದಿ ಸಿದ್ಧಾಂತವನ್ನು ಹೊಂದಿದ್ದ ಜೆ.ಎಚ್.ಪಟೇಲರು ಜಾತಿ, ಮತ, ಧರ್ಮಗಳೆಂಬ ಬೇಧ ಮಾಡದೇ ಸಮಾನತೆಯ ಸಂಕೇತವಾಗಿದ್ದವರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಹೇಳಿದ್ದಾರೆ.
- ಚನ್ನಗಿರಿ ಕಸಾಪ ನೇತೃತ್ವದಲ್ಲಿ ಸಮಾಜವಾದ- ಜೆ.ಎಚ್.ಪಟೇಲ್ ವಿಚಾರ ಸಂಕಿರಣ
- - -
ಕನ್ನಡಪ್ರಭ ವಾರ್ತೆ ಚನ್ನಗಿರಿ
ಸಮಾಜವಾದಿ ಸಿದ್ಧಾಂತವನ್ನು ಹೊಂದಿದ್ದ ಜೆ.ಎಚ್.ಪಟೇಲರು ಜಾತಿ, ಮತ, ಧರ್ಮಗಳೆಂಬ ಬೇಧ ಮಾಡದೇ ಸಮಾನತೆಯ ಸಂಕೇತವಾಗಿದ್ದವರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಹೇಳಿದರು.
ಅವರು ಗುರುವಾರ ಪಟ್ಟಣದ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಜೆ.ಎಚ್.ಪಟೇಲ್ ಹುಟ್ಟುಹಬ್ಬ ಅಂಗವಾಗಿ ಏರ್ಪಡಿಸಿದ್ದ ಸಮಾಜವಾದ ಮತ್ತು ಜೆ.ಎಚ್.ಪಟೇಲ್ ಎಂಬ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಮ ಮನೋಹರ ಲೋಹಿಯಾ ಹಾಗೂ ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಜೆ.ಎಚ್.ಪಟೇಲ್ ಅವರು 1967ರಲ್ಲಿ ಸಂಸದರಾಗಿದ್ದಾಗ ಆಗಿನ ಸಂದರ್ಭದಲ್ಲಿ ಪಾರ್ಲಿಮೆಂಟ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಲಾಪಗಳು ನಡೆಯುತ್ತಿದ್ದವು. ಇದನ್ನು ಗಮನಿಸಿದ ಪಟೇಲರು ಭಾರತ ದೇಶದಲ್ಲಿ ಹಲವಾರು ರಾಜ್ಯಗಳಿದ್ದು, ಆಯಾ ರಾಜ್ಯದ ಮಾತೃಭಾಷೆಗಳು ಬೇರೆಯಾಗಿರುತ್ತವೆ. ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಲಾಪಗಳು ನಡೆದರೆ ಬೇರೆ ರಾಜ್ಯದ ಸಂಸದರು ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬ ವಿಚಾರವನ್ನು ಮನಗಂಡರು. ಅಲ್ಲದೇ, ವಿಷಯ ಮಂಡನೆಗಳು ಯಾವುದೇ ಭಾಷೆಯಲ್ಲಿ ನಡೆಯಲಿ, ಆಯಾ ಭಾಷಾ ತರ್ಜುಮೆಗಾರರನ್ನು ನೇಮಕ ಮಾಡಿ ದೇಶದ ಎಲ್ಲ ಚುನಾಯಿತ ಸಂಸದರಿಗೆ ಅರ್ಥ ಆಗುವಂತೆ ಕಲಾಪಗಳು ನಡೆಯಲಿ ಎಂಬ ವಿಚಾರವನ್ನು ಜೆ.ಎಚ್.ಪಟೇಲ್ ಮಂಡನೆ ಮಾಡಿದ್ದರು. ಆಗ ಪಟೇಲರ ಈ ಆಗ್ರಹ ಸಭೆ ಒಕ್ಕೂರಲಿನಿಂದ ಸ್ವಾಗತಿಸಿತು. ಆ ದಿನದಿಂದ ದೇಶದ ಎಲ್ಲ ಭಾಷೆಯ ತರ್ಜುಮೆಗಾರರನ್ನು ನೇಮಕ ಮಾಡಿದ್ದು, ಆ ಮೂಲಕ ಕನ್ನಡ ಭಾಷೆಯ ಗೌರವವನ್ನು ಎತ್ತಿ ಹಿಡಿದ ಧೀಮಂತ ನಾಯಕರಾಗಿ ಪಟೇಲರು ಗುರುತಿಸಿಕೊಂಡರು ಎಂದರು.
ತಾಲೂಕಿನ ನೆಲದಿಂದ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಪಡೆದು, ವರ್ಣರಂಜಿತವಾದ ರಾಜಕಾರಣ ಮಾಡುತ್ತಾ ಪ್ರಜಾಪ್ರಭುತ್ವವದ ಮೌಲ್ಯಗಳನ್ನು ಗೌರವಿಸುತ್ತಿದ್ದವರು ಪಟೇಲರು. ಅವರ ರಾಜಕೀಯ ಜೀವನದ ಹೆಜ್ಜೆ ಗುರುತುಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದರು.
ಕ.ಸಾ.ಪ. ಮಾಜಿ ಅಧ್ಯಕ್ಷ ಚನ್ನಬಸಪ್ಪ ಮಾತನಾಡಿ, ಜೆ.ಎಚ್.ಪಟೇಲ್ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಟಿ.ಎಂ.ವಿ. ಓಂಕಾರನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಬ ಹೋಬಳಿ ಅಧ್ಯಕ್ಷ ಜಿ.ಚಿನ್ನಸ್ವಾಮಿ, ಬಸವನಗೌಡ, ಕನ್ನಡದ ಪರಿಚಾರಕರಾದ ಆರ್.ಎಸ್. ಮಲ್ಲಿಕಾರ್ಜುನ್, ಕಮಲಮ್ಮ, ಬಿ.ಆರ್.ಬಸಪ್ಪ ಉಪಸ್ಥಿತರಿದ್ದರು.
- - -
-1ಕೆಸಿಎನ್ಜಿ1:
ಚನ್ನಗಿರಿ ತಾಲೂಕು ಕ.ಸಾ.ಪ. ವತಿಯಿಂದ ಏರ್ಪಡಿಸಿದ್ದ ಸಮಾಜವಾದ ಮತ್ತು ಜೆ.ಎಚ್.ಪಟೇಲ್ ಎಂಬ ವಿಚಾರ ಸಂಕಿರಣದ ಉದ್ಘಾಟನೆಯನ್ನು ತಾಲೂಕು ಕ.ಸಾ.ಪ. ಅಧ್ಯಕ್ಷ ಎಲ್.ಜಿ.ಮಧುಕುಮಾರ್ ನೆರವೇರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.