ಕನ್ನಡಪ್ರಭ ವಾರ್ತೆ ಹನೂರು
ನೀರಾವರಿ ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಕೆ.ಕೆ. ರಘುಪತಿ, ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣ, ಎಇಇ ಉಮೇಶ್, ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಆಡಳಿತಾಧಿಕಾರಿ ಮಹೇಶ್ ಸೇರಿ ಅಧಿಕಾರಿಗಳು ಜೊತೆಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ 20 ವರ್ಷಗಳಲ್ಲಿಯೇ ಕಂಡುಬರದ ರೀತಿ ಹುಬ್ಬೆ- ಹುಣಸೆ ಡ್ಯಾಂ ಹಾಗೂ ತಟ್ಟೆ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಹನೂರು ಪಟ್ಟಣದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗಾಲದಲ್ಲಿ ಮರುಕಳಿಸುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.ಹಿಂದೆ ಹಳ್ಳಗಳು ಅಗಲವಾಗಿ ಹಾಗೂ ಆಳವಾಗಿ ಇದ್ದುದರಿಂದ ಮಳೆನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ಪಟ್ಟಣದ ಬೆಳವಣಿಗೆಯೊಂದಿಗೆ ಹಳ್ಳಗಳ ಅಕ್ಕಪಕ್ಕದಲ್ಲಿ ಒತ್ತುವರಿ ಹೆಚ್ಚಾಗಿರುವುದು ಹಾಗೂ ನೀರಿನ ಹರಿವಿಗೆ ಅಡ್ಡಿಯಾಗುವಂತಹ ಅವೈಜ್ಞಾನಿಕ ನಿರ್ಮಾಣಗಳು ಪ್ರವಾಹ ಪರಿಸ್ಥಿತಿಗೆ ಕಾರಣವಾಗುತ್ತಿವೆ. ಹೀಗಾಗಿ ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗದೆ, ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಪರಿಹಾರ ರೂಪಿಸಬೇಕಿದೆ ಎಂದು ಹೇಳಿದರು.
ಹನೂರು ಪಟ್ಟಣದಲ್ಲಿ ಮಳೆನೀರಿನ ಪ್ರವಾಹವನ್ನು ನಿಯಂತ್ರಿಸುವ ಉದ್ದೇಶದಿಂದ ಹಳ್ಳದ ಎರಡೂ ಬದಿಗಳಲ್ಲಿ ಸುಮಾರು 3 ರಿಂದ 4 ಮೀಟರ್ ಎತ್ತರದ ತಡೆಗೋಡೆ (ರಿಟೈನಿಂಗ್ ವಾಲ್) ನಿರ್ಮಿಸುವ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
ಕಾಮಗಾರಿಗೆ ಬೇಕಾಗುವ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಅನುದಾನ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದ ಅನುದಾನ ಮಂಜೂರಾದ ಬಳಿಕ ಕಾಮಗಾರಿ ಕೈಗೆತ್ತಿಕೊಂಡು ಮುಂದಿನ ದಿನಗಳಲ್ಲಿ ಪ್ರವಾಹ ಸಮಸ್ಯೆ ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಳ್ಳಗಳು, ಡ್ಯಾಂ ಹಾಗೂ ತಗ್ಗು ಪ್ರದೇಶಗಳ ಸಮೀಪ ವಾಸಿಸುವ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಮತ್ತು ಅಪಾಯಕಾರಿ ಪ್ರದೇಶಗಳಿಗೆ ತೆರಳಬಾರದು ಎಂದು ಮನವಿ ಮಾಡಿದರು.