ಶಾಸಕರೇ, ಮೆದುಳು, ನಾಲಗೆ ಅಂತರ ಕಡಿಮೆ ಮಾಡಿಕೊಳ್ಳಿ

KannadaprabhaNewsNetwork |  
Published : Oct 02, 2026, 01:45 AM IST
01 ಜೆ.ಜಿ.ಎಲ್..1) ಜಗಳೂರು ಕ್ಷೇತ್ರದಲ್ಲಿ ರಾಜಕೀಯ ಕಾವು ಏರಿದ್ದು, ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಅವರು ಹಾಲಿ ಶಾಸಕ ಬಿ. ದೇವೇಂದ್ರಪ್ಪ ಅವರ ಕಾರ್ಯವೈಖರಿ ಹಾಗೂ ಅಭಿವೃದ್ಧಿ ಹಕ್ಕುಗಳ ವಿರುದ್ಧ ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕ್ಷೇತ್ರದ ಶಾಸಕರಾಗಿ ದೇವೇಂದ್ರಪ್ಪ ಅವರು ಮೂರೂವರೆ ವರ್ಷ ಕಳೆದರೂ ತಾಲೂಕಿನ ಪ್ರಗತಿ ಪರಿಶೀಲನೆ ಮಾಡಿಲ್ಲ. ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಬರಪಟ್ಟಿಯ ಮೊದಲ 3 ಹಂತಗಳಲ್ಲಿ ಜಗಳೂರು ಸೇರದಿರಲು ಶಾಸಕರು ಮತ್ತು ಅಧಿಕಾರಿಗಳ ಅಕ್ಷಮ್ಯ ವೈಫಲ್ಯವೇ ಕಾರಣ. ​ಜಗಳೂರಿನ ಜನರನ್ನು ''ಜೀವಂತ ಶವ'' ಎಂದು ಕರೆಯುವ ಮೂಲಕ ಕ್ಷೇತ್ರದ ಜನರಿಗೆ ಶಾಸಕರು ಅಪಮಾನ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ವಾಗ್ದಾಳಿ ನಡೆಸಿದ್ದಾರೆ.

- ಬಿ.ದೇವೇಂದ್ರಪ್ಪ ಕಾರ್ಯವೈಖರಿ ವಿರುದ್ಧ ಮಾಜಿ ಶಾಸಕ ಎಚ್.ಪಿ.ರಾಜೇಶ್ ವಾಗ್ದಾಳಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ಕ್ಷೇತ್ರದ ಶಾಸಕರಾಗಿ ದೇವೇಂದ್ರಪ್ಪ ಅವರು ಮೂರೂವರೆ ವರ್ಷ ಕಳೆದರೂ ತಾಲೂಕಿನ ಪ್ರಗತಿ ಪರಿಶೀಲನೆ ಮಾಡಿಲ್ಲ. ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಬರಪಟ್ಟಿಯ ಮೊದಲ 3 ಹಂತಗಳಲ್ಲಿ ಜಗಳೂರು ಸೇರದಿರಲು ಶಾಸಕರು ಮತ್ತು ಅಧಿಕಾರಿಗಳ ಅಕ್ಷಮ್ಯ ವೈಫಲ್ಯವೇ ಕಾರಣ. ​ಜಗಳೂರಿನ ಜನರನ್ನು ''''ಜೀವಂತ ಶವ'''' ಎಂದು ಕರೆಯುವ ಮೂಲಕ ಕ್ಷೇತ್ರದ ಜನರಿಗೆ ಶಾಸಕರು ಅಪಮಾನ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ವಾಗ್ದಾಳಿ ನಡೆಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ‘ ಎಂಬಂತೆ ವರ್ತಿಸಬಾರದು. ಶಾಸಕ ಬಿ.ದೇವೇಂದ್ರಪ್ಪ ಅವರೇ ನೀವು ನಿಜವಾಗಿಯೂ ಸಾಚಾ ಇದ್ದೀರಾ?’ ನಿಮ್ಮ ಮೆದುಳಿಗೂ ನಾಲಗೆಗೂ ಸಾಕಷ್ಟು ಅಂತರವಿದ್ದು, ಮೊದಲು ಆ ಅಂತರವನ್ನು ಕಡಿಮೆ ಮಾಡಿಕೊಳ್ಳಿ. ಯಾವುದೇ ಹಳ್ಳಿಗೆ ಹೋಗದೇ, ಕಾಂಗ್ರೆಸ್ ಪಕ್ಷವನ್ನು ಸಂಘಟಿಸದೇ ವಾಮಮಾರ್ಗದಲ್ಲಿ ಟಿಕೆಟ್ ತಂದು ಅದೃಷ್ಟವಶಾತ್ ಶಾಸಕರಾಗಿದ್ದೀರಿ ಎಂದು ಟೀಕಿಸಿದರು.

ಕ್ಷೇತ್ರ ಅಭಿವೃದ್ಧಿಗೆ ಗಮನಹರಿಸಿ:

ಇ-ಸ್ವತ್ತುಗಳಿಗಾಗಿ ಸಾರ್ವಜನಿಕರು ಅಲೆಯುತ್ತಿದ್ದಾರೆ. ವಿದ್ಯುತ್ ಅಭಾವ, ಬೆಳೆವಿಮೆ ಪರಿಹಾರ ಸಿಗದೇ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರದ ಗ್ಯಾರಂಟಿಗಳಿಂದ ಕ್ಷೇತ್ರಕ್ಕೆ ಯಾವುದೇ ನಿಜವಾದ ಅಭಿವೃದ್ಧಿ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ''''ವಿಬಿ ಜಿ ರಾಮ್ ಜಿ'''' ಯೋಜನೆಯಡಿ ಕಾರ್ಮಿಕರಿಗೆ ಬರಬೇಕಾದ ₹5 ಕೋಟಿ ಅನುದಾನ ಬಿಡುಗಡೆಯಾಗಿಲ್ಲ. 57 ಕೆರೆ ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಶಾಸಕರ ಕೊಡುಗೆ ಶೂನ್ಯವಾಗಿದೆ. ವೇದಿಕೆಯ ಮೇಲೆ ಒಂದು ತರಹ, ಬೇರೆ ಕಡೆ ಇನ್ನೋದು ತರಹ ವಚನ ಬೋಧನೆ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಇಂಥ ಚಾಳಿ ಬಿಡಿ. ಹರಿಕತೆ ವಿದ್ವಾಂಸರಂತೆ ಬರೀ ಮಾತಿನಲ್ಲೇ ಅವಧಿ ಮುಗಿಸಲು ಹೊರಟಿರುವ ನೀವು, ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು.

ಸಂಗೇನಹಳ್ಳಿ ಕೆರೆ ಅನುದಾನ ದುರ್ಬಳಕೆ:

ಶಾಸಕ ದೇವೇಂದ್ರಪ್ಪ ಮಾತಿಗೂ, ಅವರ ನಡವಳಿಕೆಗೆ ಬಹಳ ವ್ಯತ್ಯಾಸವಿದೆ. ಸಂಗೇನಹಳ್ಳಿ ಕೆರೆ ಅಭಿವೃದ್ಧಿಗೆ ಮೀಸಲಿಟ್ಟಿದ್ದ ₹2 ಕೋಟಿ ಅನುದಾನಕ್ಕೆ ಪರ್ಸಂಟೇಜ್ ಕಮಿಷನ್ ಪಡೆದುಕೊಂಡು ತಮ್ಮ ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಗೋಕಟ್ಟೆಗೆ ಬಳಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ ಗೋಕಟ್ಟೆಯನ್ನು ಬೇಲಿ (ಫೆನ್ಸಿಂಗ್) ಹಾಕಿ ಕೆರೆಯನ್ನು ''''''''ನಾನೇ ಮಾಡಿಸಿದ್ದು'''''''' ಎನ್ನುತ್ತ ಶಾಸಕರು ಸುಳ್ಳು ಕ್ರೆಡಿಟ್ ಪಡೆದುಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ನೂರಾರು ಗೋಕಟ್ಟೆಗಳಿದ್ದು, ಅವುಗಳಿಗೆ ನೀರು ತುಂಬಿಸುವ ಕೆಲಸ ಮಾಡಿ. ಸಚಿವರ ಜೊತೆ ಉತ್ತಮ ಬಾಂಧವ್ಯ ಹೊಂದಿ ಕೆಲಸ ಮಾಡುವುದನ್ನು ಕಲಿಯಿರಿ ಎಂದು ಎಚ್.ಪಿ.ರಾಜೇಶ್ ತಿರುಗೇಟು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಎ.ಎಂ. ಮರುಳಾರಾಧ್ಯ, ಪ್ರಮುಖರಾದ ಶಿವಕುಮಾರ ಸ್ವಾಮಿ, ಮಾರುತಿ, ಕುಬೇಂದ್ರಪ್ಪ, ಬಡಣ್ಣ, ಹೊನ್ನಮರಡಿ ಬಾಲರಾಜು, ಬಾಬುರೆಡ್ಡಿ, ಅರವಿಂದ್ ಪಾಟೀಲ್, ಪೂಜಾರ್ ಸಿದ್ದಪ್ಪ, ಕ್ಯಾಂಪ್ ರೇವಣ್ಣ, ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.‌

- - -

-01ಜೆ.ಜಿ.ಎಲ್1:

ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ಹಾಲಿ ಶಾಸಕ ಬಿ.ದೇವೇಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯಗೊಳ್ಳಬೇಕು: ಕಾವೇರಿ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕ್ರೀಡಾಕೂಟ..!