ಅಸ್ತಿತ್ವದಲ್ಲಿ ಇಲ್ಲದ ಮಹಿಳಾ ಸಂಘಕ್ಕೆ ಸಾಲ ನೀಡಿಲ್ಲ

KannadaprabhaNewsNetwork |  
Published : Mar 25, 2025, 12:47 AM IST
೨೪ಕೆಎಲ್‌ಆರ್-೪ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರದ ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಟಿಗೋಷ್ಟಿಯಲ್ಲಿ ಬ್ಯಾಂಕಿನಲ್ಲಿ ಅವ್ಯವಹಾರಗಳ ಕುರಿತ ಆರೋಪಗಳನ್ನು ತಳ್ಳಿಹಾಕಿ ತನಿಖಾ ವರದಿಗಳ ದಾಖಲೆ ಪ್ರದರ್ಶಿಸುತ್ತಿರುವುದು. | Kannada Prabha

ಸಾರಾಂಶ

ಸರ್ಕಾರವೇ ನೇಮಿಸಿದ್ದ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಕಲ್ಲಪ್ಪ ಓಬಣ್ಣಗೋಳ್ ನೇತೃತ್ವದ ಪರಿಶೀಲನಾ ಸಮಿತಿ ಮಹಿಳಾ ಸ್ವಸಹಾಯ ಸಂಘಗಳ ಗುಂಪುಗಳ ಪ್ರತಿನಿಧಿ, ಸದಸ್ಯರನ್ನೇ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಈ ವರದಿ ನೀಡಿದ್ದು, ಅಸ್ಥಿತ್ವದಲ್ಲಿ ಇರದ ಯಾವುದೇ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿರುವ ಪೂರಕ ದಾಖಲೆ ಕಂಡು ಬಂದಿಲ್ಲ ಎಂದು ಉಲ್ಲೇಖಿಸಿದೆ.

ಕನ್ನಡಪ್ರಭ ವಾರ್ತೆ ಕೋಲಾರ ಅಸ್ಥಿತ್ವದಲ್ಲಿ ಇರದ ಯಾವುದೇ ಮಹಿಳಾ ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ ಸಾಲ ನೀಡಿಲ್ಲ, ದಾಖಲೆಗಳ ನಿರ್ವಹಣೆ ಸರಿಯಾಗಿದೆ ಎಂದು ಸರ್ಕಾರವೇ ನೇಮಿಸಿದ್ದ ಪರಿಶೀಲನಾ ಸಮಿತಿ ವರದಿ ನೀಡಿದೆ. ಆದರೂ ವಿನಾಕಾರಣ ಆರೋಪ ಮಾಡಲಾಗುತ್ತಿದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ದಾಖಲೆಗಳನ್ನು ಪ್ರದರ್ಶಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳಾ ಸಂಘಗಳ ಬಡ್ಡಿ ಕ್ಲೈಂ, ಸಾಲ ನೀಡಿಕೆಯಲ್ಲಿ ಅವ್ಯವಹಾರಗಳ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನತೆಗೆ ಸತ್ಯ ತಿಳಿಸುವ ದೃಷ್ಟಿಯಿಂದ ಮಾಹಿತಿ ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದರು.ಪರಿಶೀಲನಾ ಸಮಿತಿ ವರದಿ

ಸರ್ಕಾರವೇ ನೇಮಿಸಿದ್ದ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಕಲ್ಲಪ್ಪ ಓಬಣ್ಣಗೋಳ್ ನೇತೃತ್ವದ ಪರಿಶೀಲನಾ ಸಮಿತಿ ಮಹಿಳಾ ಸ್ವಸಹಾಯ ಸಂಘಗಳ ಗುಂಪುಗಳ ಪ್ರತಿನಿಧಿ, ಸದಸ್ಯರನ್ನೇ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಈ ವರದಿ ನೀಡಿದ್ದು, ಅಸ್ಥಿತ್ವದಲ್ಲಿ ಇರದ ಯಾವುದೇ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿರುವ ಪೂರಕ ದಾಖಲೆ ಕಂಡು ಬಂದಿಲ್ಲ ಎಂದು ಉಲ್ಲೇಖಿಸಿದೆ ಎಂದು ತಿಳಿಸಿದರು. ನಾನು ಲಾ ಮೇಕರ್ ಅಲ್ಲ, ಶಾಸನ ಸಭೆಯಲ್ಲಿ ಇರುವವರಿಗೆ ಕಾನೂನು ರಚಿಸುವ ಅವಕಾಶ ಇದೆ, ಸರ್ಕಾರವೇ ರಚಿಸಿದ ಸಮಿತಿ ವರದಿ ನಂತರವೂ ಇಂತಹ ಆರೋಪಗಳು ಬಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ನನ್ನ ವಿರುದ್ದ ೭ ಎಫ್‌ಐಆರ್ ಹಾಕಿಸಲಾಗಿದೆ, ಎಲ್ಲವೂ ಕಟ್ ಅಂಡ್ ಪೇಸ್ಟ್ ಮಾಡಿರೋದು, ದುರುದ್ದೇಶದಿಂದ ಮಾಡಿರುವ ಆರೋಪಗಳಾಗಿದ್ದು, ನಿಯಮಾನುಸಾರ ನ್ಯಾಯಾಲಯ ಇದಕ್ಕೆ ತಡೆಯಾಜ್ಞೆ ನೀಡಿದೆ ಎಂದರು.

ಆಡಳಿತ ಮಂಡಳಿ ಒಪ್ಪಿಗೆ

ಶಾಸಕರಾದ ಕೊತ್ತೂರು ಮಂಜುನಾಥ್ ಇತ್ತೀಚೆಗೆ ಜಾತ್ರೆಯೊಂದರಲ್ಲಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ನೀಡಿ ಬ್ಯಾಂಕ್, ಸಹಕಾರ ಸಂಘಗಳ ಹಣ ತಿಂದವರಿಗೆ ರೋಗ ಬರಲಿ ಎಂದು ಹೇಳಿದ್ದಾರೆ ಇದಕ್ಕೆ ನನ್ನ ಸಹಮತವಿದೆ. ಸಾಲ ನೀಡಿಕೆಗೆ ಬ್ಯಾಂಕ್ ಆಡಳಿತ ಮಂಡಳಿ ಒಪ್ಪಿಗೆ ಪಡೆದು ನಂತರ ವಿತರಿಸಲಾಗಿದೆ ಎಂದು ತಿಳಿಸಿದರು.

ನನ್ನ ಮೇಲೆ ಹಾಕಿರುವ ಎಫ್‌ಐಆರ್ ಪ್ರತಿಗಳನ್ನು ಗಮನಿಸಿದರೆ ಎಲ್ಲಾ ಒಂದೇ ರೀತಿ ಇದೆ, ಇದು ದುರುದ್ದೇಶಪೀಡಿತವಾಗಿ ನೀಡಿರುವ ದೂರು ಎಂದು ಅರ್ಥವಾಗುತ್ತದೆ, ಸೊಸೈಟಿಗಳಲ್ಲಿ ಯಾವುದೇ ರೀತಿ ಸಾಲ ಬಾಕಿಯಿಲ್ಲ, ಹೊರ ಬಾಕಿಯಿಲ್ಲ ಎಂಬುದಕ್ಕೆ ಬ್ಯಾಂಕಿನಿಂದ ಪ್ರಮಾಣ ಪತ್ರ ನೀಡಿದ್ದಾರೆ ಎಂದು ತಿಳಿಸಿದರು.₹11 ಕೋಟಿ ಅವ್ಯವಹಾರ

ಬ್ಯಾಂಕ್‌ಗೆ ಸಂಬಂಧಿಸಿದ ಪರಿವೀಕ್ಷಣಾ ವರದಿಯಲ್ಲಿ ಹಿಂದೆ ಬಿಲ್ ಕ್ಲೈಮ್ ಆಗಿರುವ ಬಗ್ಗೆ ಮಾಹಿತಿ ಲಗತ್ತಿಸಲಾಗಿದೆ. ಚಿಂತಾಮಣಿ ಶಾಖೆ ಸೇರಿದಂತೆ ವಿವಿಧ ಕಡೆ ೧೧ ಕೋಟಿ ಅವ್ಯವಹಾರ ನಡೆದಿದೆ, ಈ ಬಗ್ಗೆ ತನಿಖೆ ಮಾಡಿ ವ್ಯವಸ್ಥಾಪಕ ನಿರ್ದೇಶಕರು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ತಿಳಿಸಿದರು.ಸಾಲ ಮನ್ನಾ ಹಣ ರೈತರ ಖಾತೆಗೆ

ಸಾಲ ಮನ್ನಾದ ಹಣ ದುರುಪಯೋಗದ ಕುರಿತ ಆರೋಪಗಳ ಕುರಿತು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಮಿತಿ ನಡೆಸಿದ ತನಿಖೆಯಲ್ಲೂ ‘ರಾಜ್ಯ ಸರ್ಕಾರ ರೈತರಿಗಾಗಿ ಜಾರಿಗೆ ತಂದಿದ್ದ ಸಾಲ ಮನ್ನಾ ಯೋಜನೆಯಡಿ ರೈತರ ಸಾಲ ಮನ್ನಾದ ಮೊತ್ತ ನೇರವಾಗಿ ಸರ್ಕಾರದಿಂದ ರೈತರ ಖಾತೆಗಳಿಗೆ ಜಮಾ ಆಗಿರುವುದು ಕಂಡು ಬಂದಿದೆ ಎಂದು ತಿಳಿಸಿದರು.ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಇಷ್ಟೊಂದು ತನಿಖಾ ವರದಿಗಳು ತಿಳಿಸಿದ್ದರೂ ವಿನಾಕರಣ ಅಪಪ್ರಚಾರ ನಡೆಸುವ ಮೂಲಕ ಬ್ಯಾಂಕಿನ ಘನತೆಗೆ ಕಳಂಕ ತರುತ್ತಿದೆ. ಇನ್ನಾದರೂ ಆರೋಪ ಮಾಡುವ ಮಹನೀಯರು ಸತ್ಯಾಂಶ ಅರಿತು ಮಾತನಾಡಲಿ ಎಂದು ತಾಕೀತು ಮಾಡಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ